ಬೆಂಗಳೂರು, ಸೆ. 14- ಕಾರಿನಲ್ಲಿ ಸುತ್ತಾಡುತ್ತ ಒಬ್ಬಂಟಿಯಾಗಿ ಓಡಾಡುವ ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಅಸ್ಸಾಂ ಮೂಲದ ಮೂವರು ಆರೋಪಿಗಳು ಸೇರಿದಂತೆ ಐದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 50 ಲಕ್ಷ ರೂ. ಮೌಲ್ಯದ ಮೊಬೈಲ್‍ಗಳು ಎರಡು ಕಾರು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ಮೂಲದ ಅಬ್ದುಲ್ ರಹಿಂ, ಹುಸೇನ್ ಚೌದರಿ, ಅಸ್ಲಾಂ ಹುಸೇನ್ ಬಂಧಿತ ಸುಲಿಗೆಕೋರರಾಗಿದ್ದು, ಇವರಿಂದ ಸುಲಿಗೆ ಮಾಡಿದ್ದ ವಸ್ತುಗಳನ್ನು ಸ್ವೀಕರಿಸುತ್ತಿದ್ದ ಅಸ್ಸಾಂನ ಜಮಾಲ್ ವುದ್ದೀನ್ ಮತ್ತು ಬೆಂಗಳೂರಿನ ಮಾರತ್‍ಹಳ್ಳಿಯ ದಿಲೀಪ್ ಕುಮಾರ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿ ಹಲವಾರು ತಿಂಗಳುಗಳಿಂದ ಉತ್ತರ ಭಾರತದ ಐದಾರು ಮಂದಿಯ ತಂಡವೊಂದು ಕಾರಿನಲ್ಲಿ ಸುತ್ತಾಡುತ್ತಾ ತಮ್ಮ ಬಳಿ ಮಾರಕಾಸ್ತ್ರ ಗಳನ್ನು ಇಟ್ಟುಕೊಂಡು ಒಬ್ಬಂಟಿಯಾಗಿ ಓಡಾಡುವ ಸಾರ್ವಜನಿಕರಿಗೆ ಮಾರಕಾಸ್ತ್ರ ವನ್ನು ತೋರಿಸಿ, ಬೆದರಿಸಿ ಮೊಬೈಲ್ ಪೋನ್‍ಗಳು, ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗುತ್ತಿತ್ತು.
ಮಾರತ್‍ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರತ್‍ಹಳ್ಳಿ, ಕಾಡುಬೀಸನಹಳ್ಳಿ ಬ್ರಿಡ್ಜ್ ಬಳಿ ಮಾರಕಾಸ್ತ್ರ ಗಳೊಂದಿಗೆ ಕಾರಿನಲ್ಲಿ ಸುತ್ತಾಡುತ್ತ ಸುಲಿಗೆ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೃತ್ಯ ಎಸಗಲು ಸಜ್ಜಾಗಿದ್ದ ಮೂವರು ಅಸ್ಸಾಂ ರಾಜ್ಯದ ಸುಲಿಗೆಕೋರರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಮಾರಕಾಸ್ತ್ರ ಗಳು ಮತ್ತು ನಗರದ ವಿವಿಧ ಕಡೆ ಸುಲಿಗೆ ಮಾಡಿದಂತಹ ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಮಯದಲ್ಲಿ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳು ನಗರದ ವಿವಿಧ ಕಡೆಗಳಲ್ಲಿ ನೂರಾರು ಮೊಬೈಲ್ ಪೋನ್‍ಗಳನ್ನು ಸುಲಿಗೆ ಮಾಡಿ ಅವುಗಳನ್ನು ಪ್ಲ್ಯಾಸ್ ಮಾಡಿಸಿ ಬೇರೆ ಬೇರೆ ಕಡೆಗಳಲ್ಲಿ ಸಹಚರರ ಮುಖಾಂತರ ಮಾರಾಟ ಮಾಡಿಸುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿರುತ್ತದೆ.
ಸುಲಿಗೆ ಮಾಡಿದ್ದ ಮೊಬೈಲ್ ಮಾರಾಟ ಮಾಡಲು ಮತ್ತು ಪ್ಲ್ಯಾಸ್ ಮಾಡಿಸಲು ಸಹಕರಿಸುತ್ತಿದ್ದಂತಹ ಇನ್ನಿಬ್ಬರನ್ನು ಸಹ ಬಂ„ಸಸಲಾಗಿದೆ. ಆರೋಪಿಗಳಿಂದ ಒಟ್ಟು 619 ವಿವಿಧ ಕಂಪೆನಿಯ ಮೊಬೈಲ್‍ಗಳು, ಎರಡು ಕಾರುಗಳು ದ್ವಿಚಕ್ರ ವಾಹನ, ಲ್ಯಾಪ್‍ಟಾಪ್ ಮತ್ತು ಒಂದು ಡಾಂಗಲ್ ನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ಪತ್ತೆಯಾದ ಮೊಬೈಲ್‍ಗಳು ನಗರದ ಬಾಗಲೂರು, ಹನುಮಂತ ನಗರ, ಸಿಟಿ ಮಾರ್ಕೆಟ್, ಕಾಟನ್ ಪೇಟೆ, ದೇವನಹಳ್ಳಿ ಮತ್ತು ಚಾಮರಾಜಪೇಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಸುಲಿಗೆ ಪ್ರಕರಣಗಳಿಗೆ ಸಂಬಂಧಪಟ್ಟಿರುತ್ತದೆ.
ಈ ತಂಡದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮತ್ತು ವಶಪಡಿಸಿಕೊಂಡಿರುವ ಮೊಬೈಲ್ ಪೋನ್‍ಗಳ ವಾರಸುದಾರರ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ.