ಆರಕ್ಕೇರದ ಬಿಜೆಪಿ, ಮೂರಕ್ಕಿಳಿಯದ ಕಾಂಗ್ರೆಸ್, ಜೆಡಿಎಸ್ ಜೋಶ್

Social Share

ಬೆಂಗಳೂರು,ನ.21- ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ಸರಳ ಬಹುಮತ ದೊರೆಯುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ರಾಜ್ಯದಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ನಿರ್ಮಾಣಗೊಂಡು ಸಮ್ಮಿಶ್ರ ಸರ್ಕಾರ ಅನಿವಾರ್ಯವಾಗಲಿದೆ ಎಂಬ ಜಿಜ್ಞಾಸೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಆಡಳತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು 2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಅಪೇಕ್ಷೆ ಹೊಂದಿವೆ. ಆದರೆ, ನಾಡಿನ ಜನರ ನಾಡಿಮಿಡಿತವೇ ಬೇರೆಯಾಗಿದೆ.

ಚುನಾವಣೆ ಘೋಷಣೆಯಾಗದಿದ್ದರೂ ನಾ ಮುಂದು ತಾ ಮುಂದು ಎಂದು ಜನರನ್ನು ಓಲೈಸಲು ಪೈಪೋಟಿಗಿಳಿದಿವೆ. ನಿರಂತರ ಸಭೆ, ಸಮಾರಂಭ, ಮೆರವಣಿಗೆಯಂತಹ ಕಾರ್ಯಕ್ರಮಗಳ ಮೂಲಕ ತಮ್ಮದೇ ಆದ ರೀತಿಯಲ್ಲಿ ಮತದಾರರ ಮನಗೆಲ್ಲುವ ಪ್ರಯತ್ನದಲ್ಲಿ ನಿರತವಾಗಿವೆ. ಆದರೂ ಕಳೆದ 2018ರ ವಿಧಾಸಭೆಯ – ಫಲಿತಾಂಶದಂತೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಅತಂತ್ರ -ಫಲಿತಾಂಶ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ.

ಯಾವುದೇ ಒಂದು ಪಕ್ಷಕ್ಕೆ ನಿಚ್ಚಳ ಬಹುಮತ ದೊರೆಯುತ್ತದೆ ಎಂಬ ಖಾತ್ರಿ ಇಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂ ಐದು ತಿಂಗಳ ಅವಧಿ ಇದ್ದರೂ ರಾಜಕೀಯ ಪಕ್ಷಗಳು ನಿರಂತರವಾಗಿ ತಯಾರಿಯಲ್ಲಿ ತೊಡಗಿವೆ. ಜೊತೆಗೆ ಪರಸ್ಪರ ಆರೋಪ ಪ್ರತ್ಯಾರೋಪಗಳು ನಿರಂತರವಾಗಿ ನಡೆಯುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮದೇ ಆದ ಆಂತರಿಕ ಸಮೀಕ್ಷೆಗಳನ್ನು ನಡೆಸಿವೆ.

ಲವ್ ಜಿಹಾದ್ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ

ಆ ಸಮೀಕ್ಷಾ ವರದಿಯಲ್ಲೂ ಯಾವುದೇ ಪಕ್ಷಕ್ಕೆ ಸರಳ ಬಹುಮತ ದೊರೆಯುವುದಿರಲಿ ನೂರರ ಗಡಿದಾಟುವುದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಖಾಸಗಿ ಸಂಸ್ಥೆಗಳಿಂದಲೂ ಎರಡೂ ಮೂರು ಸಮೀಕ್ಷಾ ವರದಿಗಳನ್ನು ಉಭಯ ಪಕ್ಷಗಳು ಪಡೆದಿವೆ. ಆ ವರದಿಗಳಲ್ಲೂ ರಾಷ್ಟ್ರೀಯ ಪಕ್ಷಗಳಿಗೆ ನಿರಾಸೆಯಾಗುವ ಮಾಹಿತಿಯೇ ಹೊರಬಿದ್ದಿದೆ.

ಅಲ್ಲದೆ, ಬಿಜೆಪಿ ಹಾಗೂ ಕಾಂಗ್ರೆಸ್ ಹೈಕಮಾಂಡ್‍ಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಚುನಾವಣಾ ಪೂರ್ವ ಕ್ಷೇತ್ರವಾರು ಮಾಹಿತಿ ಪಡೆದಿವೆ. ಅದರಲ್ಲೂ ಸರಳ ಬಹುಮತ ದೊರೆಯುವ ಸೂಚನೆಗಳು ದೊರೆತಿಲ್ಲ.
ಎಲ್ಲಾ ರೀತಿಯ ಸಮೀಕ್ಷಾ ಮಾಹಿತಿ ಪ್ರಕಾರ ಆಡಳಿತಾರೂಢ ಬಿಜೆಪಿಯೂ 80-90 ಸ್ಥಾನ ಪಡೆದರೆ, ಕಾಂಗ್ರೆಸ 85ರಿಂದ 95 ಸ್ಥಾನಗಳಿಸಲಷ್ಟೇ ಸಾಧ್ಯ ಎಂಬ ಅಂಶ ಗೊತ್ತಾಗಿದೆ. ಇನ್ನೂ ಜೆಡಿಎಸ್‍ಗೂ ಈಗಿರುವ ಸ್ಥಾನಗಳಿಗಿಂತ ಹೆಚ್ಚು ದೊರೆಯುವ ಸಾಧ್ಯತೆ ವಿರಳ ಎಂಬ ಮಾಹಿತಿ ಇದೆ.

ಹೀಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ದೌರ್ಬಲ್ಯವೇನು? ನ್ಯೂನ್ಯತೆಗಳೇನು ಎಂಬ ಕಡೆಗೆ ಗಮನ ಹರಿಸಿವೆ. ಆರು ತಿಂಗಳ ಮುನ್ನವೇ ಚುನಾವಣಾ ಪ್ರಚಾರಕ್ಕೆ ಇಳಿದಿದ್ದು, ಜನರ ಅಪೇಕ್ಷೆ ಏನು? ಆಡಳಿತ ಪರವೇ? ಅಥವಾ ವಿರುದ್ಧವೇ ಎಂಬುದನ್ನು ಅರಿಯುವ ಪ್ರಯತ್ನ ಮಾಡುತ್ತಿವೆ.

ಮುಂದಿನ ಚುನಾವಣೆಯಲ್ಲಿ ಜನರ ನಾಡಿ ಮಿಡಿತ ಹೇಗಿರಲಿದೆ ಎಂಬ ಬಗ್ಗೆ ರಾಜಕೀಯ ಪಕ್ಷಗಳ ನಾಯಕರು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಿಗೂ ಹೆಚ್ಚಿನ ಪ್ರಮಾಣದ ಜನರು ಸೇರುವುದು, ಶಕ್ತಿ ಪ್ರದರ್ಶನ ಮಾಡುವುದು ಸಾಮಾನ್ಯವಾಗಿದೆ.

ಬಿಜೆಪಿಯು ಸರ್ಕಾರದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ನೆಪದಲ್ಲಿ ಜನಮನ ಗೆಲ್ಲುವ ಪ್ರಯತ್ನ ಮಾಡುತ್ತಿದೆ. ಜತೆಗೆ ಜನಸ್ಪಂದನಾ ಯಾತ್ರೆಯನ್ನು ಕೈಗೊಳ್ಳುತ್ತಿದೆ. ಸರ್ಕಾರದ ಮೇಲೆ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪವು ಆಡಳಿತ ವಿರೋಧ ನಿಲುವನ್ನು ಜನರು ತಳೆಯಲು ಪ್ರಮುಖ ಕಾರಣವಾಗಿದೆ.

ಭ್ರಷ್ಟಾಚಾರದ ಆರೋಪವನ್ನು ತಳ್ಳಿ ಹಾಕುವ ಪ್ರಬಲ ಅಸ್ತ್ರಗಳು ಬಿಜೆಪಿಯಲ್ಲಿ ಇಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲದ ಮೇಲೆ ಮತ್ತೆ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಮಂಗಳೂರು ಸ್ಪೋಟದ ರುವಾರಿ ಶಾರೀಕ್‍ಗೆ ಐಸಿಸ್ ಲಿಂಕ್

ಆದರೂ ಮರಳಿ ಅಧಿಕಾರಕ್ಕೆ ಬರುವ ಆಸೆ ಹೊಂದಿದೆ. 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ಚುನಾವಣಾ ತಯಾರಿ ನಡೆಸಿದ್ದು, ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂಥನ-ಮಂಥನ ನಡೆಸುತ್ತಿದೆ.

ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‍ಗೆ ಸರ್ಕಾರದ ಮೇಲೆ ಪದೇ ಪದೇ ಕೇಳಿ ಬರುತ್ತಿರುವ ಭ್ರಷ್ಟಾಚಾರದ ಆರೋಪಗಳು ಪ್ರಮುಖ ಅಸ್ತ್ರವಾದರೂ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. 150 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಉದ್ದೇಶದಿಂದ ಅಧಿಕಾರಕ್ಕೆ ಬರಲು ಹರ ಸಾಹಸ ಮಾಡುತ್ತಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು, ಇವರಿಬ್ಬರ ಆಂತರಿಕ ಕಲಹವೇ ಚುನಾವಣೆಯಲ್ಲಿ ಮುಳ್ಳಾಗಿ ಪರಿಣಮಿಸಲಿದೆ. ಇಬ್ಬರೂ ನಾಯಕರ ಬೆಂಬಲಿಗರು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿರುವುದು ಇದಕ್ಕೆ ಪ್ರಮುಖ ನಿದರ್ಶನವೆನ್ನಬಹುದು.

ಚುನಾವಣಾ -ಫಲಿತಾಂಶದ ನಂತರ ಕಿಂಗ್‍ಮೇಕರ್ ಎಂಬ ಹಣೆಪಟ್ಟಿ ಹೊಂದಿರುವ ಜೆಡಿಎಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗಳಿಸಬೇಕು ಎಂಬ ಗುರಿ ಹೊಂದಿದೆ. ಅದಕ್ಕಾಗಿ ಕಳೆದ ಒಂದು ವರ್ಷದಿಂದ ನಾನಾ ಸರ್ಕಸ್ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ಜನತಾ ಜಲಧಾರೆ, ಜನತಾಮಿತ್ರ ಕಾರ್ಯಕ್ರಮಗಳನ್ನು ನಡೆಸಿದ್ದು, ಈಗ ಪಂಚರತ್ನ ರಥಯಾತ್ರೆ ಕೈಗೊಂಡಿದೆ.

ಪ್ರಾದೇಶಿಕತೆ, ನಾಡು, ನುಡಿಯಂತಹ ಭಾವನಾತ್ಮಕ ವಿಚಾರವನ್ನು ಚುನಾವಣೆಯ ಹೊಸ್ತಿಲಲ್ಲಿ ಜನರ ಮುಂದಿಟ್ಟು ವಿಶ್ವಾಸ ಗಳಿಸುವ ಯತ್ನ ಮಾಡುತ್ತಿದೆ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಆರೋಪ ಮಾಡುವ ಬದಲು ಅಧಿಕಾರಕ್ಕೆ ಬಂದರೆ ಮಾಡಲಿರುವ ಕಾರ್ಯಕ್ರಮಗಳ ಪಟ್ಟಿಯನ್ನು ಮುಂದಿಟ್ಟು ಜನರ ವಿಶ್ವಾಸ ಗಳಿಸುವ ಯತ್ನ ಮಾಡುತ್ತಿದೆ.

ಆದರೂ ಜೆಡಿಎಸ್ ಹಳೇ ಮೈಸೂರು ಭಾಗದ ಭದ್ರ ನೆಲೆಯಲ್ಲೂ ಅಭದ್ರತೆ ಕಾಡುತ್ತಿದೆ. ಹಾಲಿ ಶಾಸಕರಲ್ಲಿ ಕೆಲವರು ಪಕ್ಷದಿಂದ ಹೊರನಡೆದಿದ್ದು, ಮತ್ತೆ ಕೆಲವರು ಹೊರ ನಡೆಯಲು ಅಣಿಯಾಗಿದ್ದು, ಚುನಾವಣೆ ಎದುರು ನೋಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪಕ್ಷ ಸಂಘಟನೆ ಮಾಡುವುದರ ಜತೆಗೆ ಹೊಸ ಮುಖಗಳೊಂದಿಗೆ ಚುನಾವಣೆ ಎದುರಿಸಬೇಕಾದ ಸವಾಲು ಜೆಡಿಎಸ್ ಮುಂದಿದೆ. ಇದುವರೆಗಿನ ಸಮೀಕ್ಷೆಗಳ ಪ್ರಕಾರ ಜೆಡಿಎಸ್ ಕೂಡ 40ರ ಗಡಿ ದಾಟುವ ಸಾಧ್ಯತೆ ವಿರಳ ಎಂದೇ ಹೇಳಲಾಗುತ್ತಿದೆ.

ಇಂಡೋನೇಷ್ಯಾದಲ್ಲಿ ಭೂಕಂಪ, 20 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ

ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿರುದರಿಂದ ಯಾವ ಪಕ್ಷ ಯಾವ ಅಸ್ತ್ರ ಬಳಸಲಿದೆ, ಯಾರು ಮೈಲುಗೈ ಸಾಧಿಸಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚುನಾವಣೆಯಲ್ಲಿ ಆಡಳಿತ ಪರವಾದ ಅಲೆಯೋ ಅಥವಾ ವಿರೋಧದ ಅಲೆಯೋ ಎಂಬದನ್ನು ಇನ್ನೂ ನಿಚ್ಚಳವಾಗಿ ಜನರು ತೀರ್ಮಾನಿಸಿದಂತೆ ಕಂಡುಬರುತ್ತಿಲ್ಲ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿಯಲು ಹಾತೊರೆಯುತ್ತಿರುವ ಮೂರು ಪಕ್ಷಗಳ ನಾಯಕರು ಯಾವ ರೀತಿ ಜನರ ಮನಸ್ಸನ್ನು ಗೆಲ್ಲುತ್ತಾರೆ? ಯಾರು ಅಧಿಕಾರ ಹಿಡಿಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

assembly, election, BJP, Congress, JDS,

Articles You Might Like

Share This Article