ಬೆಂಗಳೂರು,ಮಾ.8- ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿಯ 6 ಮಂದಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಲು ಚಿಂತನಮಂಥನ ನಡೆದಿದೆ.
ಕೊನೆ ಚುನಾವಣೆಯ ಹೊಸ್ತಿಲಿನಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವಪ್ಪ (ಶಿವಮೊಗ್ಗ), ಶಾಸಕರಾದ ಎಂ.ಪಿ.ಕುಮಾರಸ್ವಾಮಿ(ಮೂಡಿಗೆರೆ), ಬಸವರಾಜ ದಡೆಸೂರು(ಕನಕಗಿರಿ), ನೆಹರು ಓಲೇಕಾರ್(ಹಾವೇರಿ), ಮಾಡಾಳ್ ವಿರೂಪಾಕ್ಷಪ್ಪ(ಚನ್ನಗಿರಿ) ಹಾಗೂ ಕೆ.ಸಿ.ನಾರಾಯಣಗೌಡ(ಕೆ.ಆರ್.ಪೇಟೆ) ಅವರುಗಳಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ.
ಈಗಾಗಲೇ ಬಿಜೆಪಿಯು ದೆಹಲಿ ಮೂಲದ ಖಾಸಗಿ ಸಂಸ್ಥೆಯಿಂದ ಐದು ಬಾರಿ ಈ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಇವರು ಸೋಲುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಬದಲು ಹೊಸ ಮುಖಗಳಿಗೆ ಅಂದರೆ ಆರ್‍ಎಸ್‍ಎಸ್,
ಸಂಘಪರಿವಾರದ ಹಿನ್ನಲೆಯುಳ್ಳ ಹಾಗೂ ಸಮಾಜದಲ್ಲಿ ಒಂದಿಷ್ಟು ಹೆಸರು ಗಳಿಸಿರುವ ಯುವ ಮುಖಗಳನ್ನು ಕಣಕ್ಕಿಳಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಭಾರತದಲ್ಲಿ ಹೋಳಿ ಹಬ್ಬ ಆಚರಿಸಿದ ಅಮೆರಿಕದ ಉನ್ನತಾಧಿಕಾರಿ
ತೀರಾ ಇತ್ತೀಚಿನವರೆಗೆ ಎಲ್ಲ ಸಮೀಕ್ಷೆಗಳಲ್ಲೂ ಮಾಡಾಳ್ ವಿರೂಪಾಕ್ಷಪ್ಪ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು. ಆದರೆ ಯಾವಾಗ ಟೆಂಡರ್ ಪ್ರಕರಣದಲ್ಲಿ ಅವರ ಪುತ್ರನೇ ಶಾಮೀಲಾಗಿ ಜೈಲು ಪಾಲಾದರೋ ಸದ್ಯ ಮಾಡಾಳ್‍ಗೆ ಟಿಕೆಟ್ ಕೊಡಬಾರದೆಂಬ ಗಟ್ಟಿ ನಿರ್ಧಾರಕ್ಕೆ ಪಕ್ಷ ಬಂದಿದೆ ಎಂದು ತಿಳಿದುಬಂದಿದೆ.
ಆಡಳಿತಾವಿರೋಧಿ ಅಲೆ ಎದುರಿಸುತ್ತಿರುವವರ ಬಗ್ಗೆ ಗೌಪ್ಯ ಮಾಹಿತಿ ಕಲೆ ಹಾಕಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದರ ಸುಳಿವು ಅರಿತೇ 4-6 ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲಿದೆ ಎಂದು ಹೇಳಿದ್ದರು.
ಯಡಿಯೂರಪ್ಪ ಹೇಳಿಕೆ ಬಗ್ಗೆ ಪಕ್ಷದಲ್ಲಿ ನಾನಾ ವ್ಯಾಖ್ಯಾನಗಳು ಪ್ರಾರಂಭವಾಗಿದ್ದು, ಟಿಕೆಟ್ ಕೈತಪ್ಪಲಿರುವ ಶಾಸಕರು ಯಾರು ಎಂಬುದೇ ನಿಗೂಢವಾಗಿ ಉಳಿದಿದೆ.
ಯಡಿಯೂರಪ್ಪ ನವರ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಹಾಲಿ ಬಿಜೆಪಿ ಶಾಸಕರ ಹೃದಯ ಬಡಿತ ಹೆಚ್ಚಾಗುವ ಹಾಗೆ ಮಾಡಿದೆ. ಐದಾರು ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಕೈ ತಪ್ಪಬಹುದು ಎಂಬ ಹೇಳಿಕೆ ಬಿಜೆಪಿ ಪಾಳಯದಲ್ಲಿ ಕಂಪನ ಮೂಡಿಸಿದೆ.
ಚುನಾವಣೆ ಸನಿಹದಲ್ಲಿರುವಾಗಲೇ ಯಡಿಯೂರಪ್ಪನವರೇ ಈ ಮಾತನ್ನು ಹೇಳಿದರೋ? ಅಥವಾ ಅವರ ಬಾಯಿಂದ ಹೈಕಮಾಂಡ್ ಹೇಳಿಸಿದೆಯೋ ಎಂಬ ಅನುಮಾನ ಹಲವರಲ್ಲಿ ಕಾಡತೊಡಗಿದೆ. ಎಲ್ಲಿ ಈ ಬಾರಿ ನಮ್ಮ ಟಿಕೆಟ್ ಕೈತಪ್ಪಲಿದೆಯೋ ಎಂಬ ಆತಂಕ ಎದುರಾಗಿದೆ.
ಈಗಾಗಲೇ ರಾಜ್ಯದಲ್ಲಿ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಅನುಸರಿಸಲಾಗುವುದು ಎಂಬ ಸುದ್ದಿ ಹಲವರಲ್ಲಿ ಆತಂಕ ಮೂಡಿಸಿತ್ತು. ಇದೀಗ ಬಿಎಸ್‍ವೈ ಹೇಳಿಕೆಯಿಂದ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಅಕ್ರಮ ವಲಸಿಗರಿಗೆ ಬ್ರಿಟನ್‍ನಿಂದ ಗೇಟ್‍ಪಾಸ್ ; ರಿಷಿ ಸುನಕ್
ಗುಜರಾತ್ ಮಾಡೆಲ್ ಕೂಡ ಇದೇ ಆಗಿದ್ದು ಹಿರಿಯರ ಬದಲು ಕಿರಿಯರಿಗೆ ಮಣೆ ಹಾಕಲಾಗಿದೆ. ಹೀಗಾಗಿ ಬಿಜೆಪಿ ಪಕ್ಷದಲ್ಲಿನ ಹಿರಿಯ ಶಾಸಕರು ಯಡಿಯೂರಪ್ಪ ಹೇಳಿಕೆಯಿಂದ ವಿಚಲಿತರಾಗಿದ್ದಾರೆ. ಈ ಬಾರಿ ಟಿಕೆಟ್ ಸಿಗುತ್ತೋ ಇಲ್ಲವೋ ಎಂಬ ಆತಂಕ ಇದೀಗ ಮನೆ ಮಾಡಲು ಶುರು ಮಾಡಿದೆ.
ಪಕ್ಷದ ಅಲಿಖಿತ ನಿಯಮದಂತೆ 70 ವರ್ಷ ಪೂರ್ಣಗೊಂಡವರಿಗೆ ಟಿಕೆಟ್ ಇಲ್ಲವೆಂಬ ಮಾತಿದೆ. ಅದನ್ನ ಗುಜರಾತ್ ಚುನಾವಣೆಯಲ್ಲಿ ಜಾರಿಗೆ ತಂದಾಗಿದೆ. ಕರ್ನಾಟಕದಲ್ಲೂ ಅದನ್ನು ಅನುಸರಿಸಲಾಗುವುದು ಎಂಬ ಆಲೋಚನೆಯಿದೆ.
ಭ್ರಷ್ಟಾಚಾರ, ಇತರ ಗಂಭೀರ ಆರೋಪ ಹೊತ್ತಿರುವ ಹಾಲಿ ಬಿಜೆಪಿ ಶಾಸಕರಿಗೆ ಇದೀಗ ಟಿಕೆಟ್ ಕೈ ತಪ್ಪುವ ಆತಂಕಕ್ಕೆ ದೂಡಿದೆ. ಈಗಾಗಲೇ ಹಲವು ಶಾಸಕರ ಮೇಲೆ ಗುರುತರ ಆರೋಪಗಳು ಕೇಳಿಬಂದಿವೆ. ಒಂದಿಬ್ಬರ ಮೇಲೆ ಚೆಕ್ ಬೌನ್ಸ್ ಪ್ರಕರಣ, ಸಾರ್ವಜನಿಕ ಹಣ ದುರುಪಯೋಗದ ಮೇಲೆ ನ್ಯಾಯಾಲಯ ತೀರ್ಪು, ಶೇ.40ರಷ್ಟು ಕಮೀಷನ್ ಆರೋಪ ಕೇಳಿಬಂದಿರುವುದರಿಂದ ಇಂಥವರಿಗೆ ಹೈಕಮಾಂಡ್ ಮಣೆ ಹಾಕುವುದಿಲ್ಲ ಎಂಬ ಅನುಮಾನ ಕಾಡಿದೆ.
ಭಾರತಕ್ಕೆ ಬಂದಿದ್ದ ಕೆನಡಾ ದೇಶದ ಖಾಯಂ ನಿವಾಸಿ ಕೊಲೆ
ಇನ್ನು ಮುಂದಿನ ಚುನಾವಣೆಯಲ್ಲಿ ಗೆಲುವು ಕಷ್ಟಸಾಧ್ಯವಿರುವ ಕೆಲ ಬಿಜೆಪಿ ಶಾಸಕರ ಎದೆ ಬಡಿತವೂ ಹೆಚ್ಚಾಗಿದೆ. ಈಗಾಗಲೇ ಬಿಜೆಪಿ ಆಂತರಿಕ ಸರ್ವೆಯಲ್ಲೂ ಕೆಲ ಹಾಲಿ ಶಾಸಕರು ಈ ಬಾರಿ ಸೋಲು ಕಾಣುವ ವರದಿ ಬಂದಿದೆ. ಅಂಥ ಹಾಲಿ ಶಾಸಕರಿಗೆ ಈ ಬಾರಿ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಿನಲ್ಲಿ ಸುಮಾರು 15ಕ್ಕೂ ಹೆಚ್ಚು ಬಿಜೆಪಿ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಆತಂಕ ಎದುರಿಸುತ್ತಿದ್ದಾರೆ.
Assembly, election, BJP, MLAs, anti-incumbency, RSS,loyalists,