ಬೆಂಗಳೂರು,ಜ.28- ಮುಂಬರುವ ವಿಧಾನಸಭೆ ಚುನಾವಣೆಗೆ ಮೂರು ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆ ನಡೆಸಿ ಮತದಾರರ ಓಲೈಕೆಗೆ ನಾನಾ ರೀತಿಯ ಸರ್ಕಸ್ ನಡೆಸುತ್ತಿರುವಾಗಲೇ ಕೆಲವರು ಸುರಕ್ಷಿತ ಕ್ಷೇತ್ರಗಳ ಶೋಧದಲ್ಲಿ ತಲ್ಲೀನರಾಗಿದ್ದಾರೆ.
ತವರು ಕ್ಷೇತ್ರದಲ್ಲಿ ಕೆಲವರಿಗೆ ಗೆಲ್ಲುವ ಅತಿಯಾದ ಆತ್ಮವಿಶ್ವಾಸವಿದ್ದರೆ ಇನ್ನು ಕೆಲವರಿಗೆ ಒಳ ಹೊಡೆತದ ಭೀತಿ ಇರುವುದರಿಂದ ಹೆಚ್ಚುವರಿಯಾಗಿ ಇನ್ನೊಂದು ಕ್ಷೇತ್ರದಲ್ಲಿ ಸರ್ಧೆ ಗೆಲ್ಲುವ ತವಕದಲ್ಲಿದ್ದಾರೆ.
ಆಡಳಿತಾರೂಢ ಬಿಜೆಪಿ,ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ನೇತಾರರೇ ಈ ಬಾರಿ ಸುರಕ್ಷಿತ ಕ್ಷೇತ್ರಗಳಲ್ಲಿ ತಮ್ಮ ರಾಜಕೀಯ ಭವಿಷ್ಯರೂಪಿಸಿಕೊಳ್ಳಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಸಾಮಾನ್ಯವಾಗಿ ಬಿಜೆಪಿ ನಾಯಕರು ಒಂದೇ ಕ್ಷೇತ್ರಕ್ಕೆ ಸ್ರ್ಪಧಿಸಲು ಹರಸಾಹಸ ನಡೆಸಬೇಕು. ಏಕೆಂದರೆ ಎಷ್ಟೇ ಪ್ರಭಾವಿ ಎಂದರೂ ವರಿಷ್ಠರು ಅಷ್ಟು ಸುಲಭವಾಗಿ ಟಿಕೆಟ್ ನೀಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಈಗಾಗಲೇ ತನ್ನ ತಂದೆಯ ಕ್ಷೇತ್ರವಾದ ಶಿಕಾರಿಪುರದಿಂದ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.
ಕಿತ್ತೂರು ಕರ್ನಾಟಕ ಬಿಜೆಪಿಯ ಭದ್ರಕೋಟೆ : ಸಿಎಂ ಬೊಮ್ಮಾಯಿ
ಕ್ಷೇತ್ರದಲ್ಲಿ ಆಗಲೇ ಕೆಲಸವನ್ನು ಆರಂಭಿಸಿರುವ ವಿಜಯೇಂದ್ರ ಮತದಾರರ ಮನಗೆಲ್ಲಲು ಬೈಕ್ ರ್ಯಾಲಿ, ಬೂತ್ ಮಟ್ಟದ ಸಭೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಶಿಕಾರಿಪುರದ ಮೇಲೆ ಕಣ್ಣಿಟ್ಟಿರುವ ವಿಜಯೇಂದ್ರ ಮತ್ತೊಂದು ಕಡೆ ಮೈಸೂರು ಜಿಲ್ಲೆ ವರುಣಾದಿಂದಲೂ ಸ್ರ್ಪಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊನೆ ಕ್ಷಣದಲ್ಲಿ ತಮ್ಮ ನಿಲುವು ಬದಲಾಯಿಸಿ ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ರ್ಪಧಿಸಿದರೆ ಅವರ ವಿರುದ್ಧ ವಿಜಯೇಂದ್ರ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಪಂಚಮಸಾಲಿ ಮೀಸಲಾತಿ ಹೋರಾಟದಿಂದ ದಿಕ್ಕೆಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಬಾರಿ ಎರಡು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಸ್ವ ಕ್ಷೇತ್ರ ಶಿಗ್ಗಾವಿಯಿಂದ ಹೆಚ್ಚುವರಿಯಾಗಿ ದಾವಣಗೆರೆ ಉತ್ತರ ಇಲ್ಲವೇ ದಾವಣಗೆರೆ ದಕ್ಷಿಣ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಶಿಗ್ಗಾವಿಯಲ್ಲಿ ಪಂಚಮಸಾಲಿ ಸಮುದಾಯವೇ ನಿರ್ಣಾಯಕವಾಗಿರುವುದು ಬೊಮ್ಮಾಯಿಗೆ ತಲೆ ಬಿಸಿ ಉಂಟು ಮಾಡಿದೆ. ಹೀಗಾಗಿ ತಮ್ಮ ಸಮುದಾಯ ಹೆಚ್ಚಾಗಿರುವ ದಾವಣಗೆರೆ ಉತ್ತರ, ಇಲ್ಲವೇ ದಕ್ಷಿಣದಲ್ಲಿ ಸ್ರ್ಪಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಪುತ್ರನಿಗೆ ರಾಜಕೀಯ ಭವಿಷ್ಯ ರೂಪಿಸಲು ತಿಣಕಾಡುತ್ತಿರುವ ಮಾಜಿ ಸಚಿವ ಈಶ್ವರಪ್ಪ, ಹಾವೇರಿ ಜಿಲ್ಲೆ ರಾಣಿಬೆನ್ನೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅಲ್ಲಿ ಬಿಜೆಪಿಯ ಹಾಲಿ ಶಾಸಕರೇ ಇರುವುದರಿಂದ ಈಶ್ವರಪ್ಪ ಲೆಕ್ಕಾಚಾರ ಅಷ್ಟು ಸುಲಭವಾಗಿ ಈಡೇರುವ ಸಾಧ್ಯತೆ ಇಲ್ಲ.
ಒಂದು ವೇಳೆ ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪ ಪುತ್ರ ಕೆ.ಎಸ್.ಕಾಂತೇಶ್‍ಗೆ ವರಿಷ್ಠರು ಟಿಕೆಟ್ ಕೊಟ್ಟರೆ ಈಶ್ವರಪ್ಪ ರಾಣಿ ಬೆನ್ನೂರು ಕ್ಷೇತ್ರಕ್ಕೆ ಬೇಡಿಕೆ ಇಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತ ರುದ್ರೇಶ್ ಕೂಡ ಎರಡು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ಕಡೆ ರಾಮನಗರ, ಮತ್ತೊಂದು ಕಡೆ ಚಾಮರಾಜನಗರ ಕ್ಷೇತ್ರದಿಂದಲೂ ಟಿಕೆಟ್ ಕೇಳಿದ್ದಾರೆ ಎನ್ನಲಾಗುತ್ತಿದೆ.
ವಸತಿ ಸಚಿವ ವಿ.ಸೋಮಣ್ಣ ಎರಡು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಪುತ್ರ ಡಾ.ಅರುಣ್ ಸೋಮಣ್ಣಗೆ ಗೋವಿಂದರಾಜನಗರ ಇಲ್ಲವೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರಕ್ಕೆ ಟಿಕೆಟ್ ನೀಡಬೇಕೆಂದು ವರಿಷ್ಠರ ಬಳಿ ಬೇಡಿಕೆ ಇಟ್ಟಿದ್ದಾರೆ.
ಒಂದು ವೇಳೆ ಬಿಜೆಪಿ ಸೋಮಣ್ಣಗೆ ಹನೂರು ಕ್ಷೇತ್ರಕ್ಕೆ ಕಡೆ ಕ್ಷಣದಲ್ಲಿ ಟಿಕೆಟ್ ಘೋಷಣೆ ಮಾಡಿದರೆ ಗೋವಿಂದರಾಜನಗರದಿಂದ ಅವರ ಪುತ್ರ ಅರುಣ್ ಸೋಮಣ್ಣ ಕಣಕ್ಕಿಳಿಯಬಹುದು.
ಇದೇ ರೀತಿ ಬಿಜೆಪಿಯಲ್ಲಿ ಅನೇಕರು ಎರಡೆರಡು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರೆ ವರಿಷ್ಠರು ಒಬ್ಬರಿಗೆ ಒಂದೇ ಕ್ಷೇತ್ರ ಎಂಬ ದಿಟ್ಟ ನಿರ್ಧಾರಕ್ಕೆ ಬಂದರೆ ಬಹುತೇಕರ ರಾಜಕೀಯ ಲೆಕ್ಕಚಾರಗಳು ತಲೆಕೆಳಗಾಗಲಿದೆ.
ಎಷ್ಟೇ ಪ್ರಭಾವಿ, ಜನ ನಾಯಕ ಎನಿಸಿಕೊಂಡರೂ ಬಿಜೆಪಿಯಲ್ಲಿ ಒಬ್ಬರಿಗೆ ಎರಡು ಟಿಕೆಟ್ ನೀಡುವುದು ಅಷ್ಟು ಸುಲಭವಲ್ಲ. ಯಡಿಯೂರಪ್ಪ ಅವರಂತಹ ಪ್ರಭಾವಿ ನಾಯಕನಿಗೆ ಎರಡು ಕ್ಷೇತ್ರಗಳಲ್ಲಿ ಸ್ರ್ಪಸಲು ಅವಕಾಶ ಕೊಟ್ಟಿರಲಿಲ್ಲ.
ಹಾಗಾಗಿ ಕೆಲವರು ಸುರಕ್ಷಿತ ಕ್ಷೇತ್ರಗಳ ಮೇಲೆ ಕಣ್ಣು ಹಾಕಿದರೂ ಬಿಜೆಪಿಯ ಚುನಾವಣಾ ಚಾಣುಕ್ಯರು ಇದಕ್ಕೆ ಸೊಪ್ಪು ಹಾಕುತ್ತಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
Assembly election, candidate, constituency, political party,