ಬೆಂಗಳೂರು,ಮಾ.9- ವಿಧಾನಸಭೆ ಚುನಾವಣೆ ಪೂರ್ವ ಸಿದ್ದತೆಗೆ ಕೇಂದ್ರ ಚುನಾವಣಾ ಆಯೋಗ ರಾಜ್ಯಕ್ಕೆ ಭೇಟಿ ಕೊಟ್ಟ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳು ಮತದಾರರಿಗೆ ನಾನಾ ರೀತಿಯ ಆಸೆ, ಆಮಿಷಗಳನ್ನು ಒಡ್ಡುತ್ತಿದ್ದು, ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ.
ಸೀರೆ, ಕುಕ್ಕರ್, ಬಾಡೂಟ, ಧಾರ್ಮಿಕ ಕ್ಷೇತ್ರ ಗಳಿಗೆ ಪ್ರವಾಸ, ರಸಮಂಜರಿ ಕಾರ್ಯಕ್ರಮ, ಕ್ರೀಡಾಕೂಟಗಳ ಆಯೋಜನೆ, ಸ್ತ್ರೀ ಶಕ್ತಿ ಸಂಘಟನೆಗಳಿಗೆ ಆರ್ಥಿಕ ನೆರವು ಹೀಗೆ ನಾನಾ ರೀತಿ ಮತದಾರರನ್ನು ಸೆಳೆಯಲು ಮುಖಂಡರು ಕಸರತ್ತು ನಡೆಸುತ್ತಿದ್ದಾರೆ.
ಕೆಲವು ಕಡೆ ಮತದಾರರಿಗೆ ಶರ್ಟ್, ಪಂಚೆ ಜೊತೆಗೆ ಮದ್ಯವನ್ನು ಸಹ ನೀಡಿದ್ದಾರೆ. ಸಿಕ್ಕದ್ದೇ ತಡ ಹಾಡಹಗಲೇ ಕಂಠಪೂರ್ತಿ ಕುಡಿದು ತೂರಾಡಿ ಉರುಳಿಬಿದ್ದಿರುವ ದೃಶ್ಯಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾಗಿವೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಮತದಾರರಿಗೆ ಆಸೆ-ಆಮಿಷಗಳನ್ನು ಒಡ್ಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಲ್ಲದೆ ಆ ವೇಳೆ ಚುನಾವಣಾ ಆಯೋಗ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಡಲಿದೆ.
ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಗೆ ಮಹೂರ್ತ ಫಿಕ್ಸ್..?
ಹಣ, ಹೆಂಡ, ಬಟ್ಟೆ, ಗಿಫ್ಟ್ ಸೇರಿದಂತೆ ಯಾವುದನ್ನು ಸಹ ಕೊಡುವಂತಿಲ್ಲ. ಅಭ್ಯರ್ಥಿಗಳ ಪ್ರತಿಯೊಂದು ಚಲನವಲನದ ಮೇಲೆ ಕಣ್ಣಿಡುವುದರಿಂದ ಏನಿದ್ದರೂ ರಾತ್ರಿ ಕಾರ್ಯಾಚರಣೆ ನಡೆಸಬೇಕು. ಈಗ ಸಾಮಾಜಿಕ ಜಾಲತಾಣವು ಜಾಗೃತವಾಗಿದ್ದು, ಪ್ರತಿಯೊಂದನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ವೈರಲ್ ಮಾಡಲಾಗುತ್ತದೆ.
ಬಹುತೇಕ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್‍ಗಳಿರುವುದರಿಂದ ಅಭ್ಯರ್ಥಿಗಳ ರಂಗುರಂಗಿನ ಆಟಗಳನ್ನು ಕ್ಷಣಾರ್ಧದಲ್ಲಿಯೇ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತದೆ. ಹೀಗಾಗಿ ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಮತದಾರರಲ್ಲಿ ಆಕಾಂಕ್ಷಿಗಳು ನಾನಾ ರೀತಿಯಲ್ಲಿ ಆಸೆ, ಆಮಿಷಗಳನ್ನು ಒಡ್ಡುತ್ತಿರುವುದು ಸರ್ವೆಸಾಮಾನ್ಯವಾಗಿದೆ.
ಭರ್ಜರಿ ಬಾಡೂಟ: ಮಂಡ್ಯ ಜಿಲ್ಲೆ ಕೆ.ಆರ್. ಪೇಟೆಯಲ್ಲಿ ಸಚಿವ ನಾರಾಯಣಗೌಡ ಅವರು ಕಳೆದ ಒಂದು ವಾರದಿಂದ ನಿರಂತರ ವಾಗಿ ಮತದಾರರಿಗೆ ಬಾಡೂಟವನ್ನು ಏರ್ಪಡಿ ಸುತ್ತಿದ್ದಾರೆ.
ಪ್ರತಿ ಗ್ರಾಪಂಗೂ ಬಾಡೂಟ ಹಾಕುವ ಮೂಲಕ ತಾವು ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಮತದಾರರ ನಾಡಿಮಿಡಿತವನ್ನು ಅರಿಯಲು ಮುಂದಾಗಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಮತದಾರರಿಗೆ ಸೇರಬೇಕಾಗಿದ್ದನ್ನು ಸಹ ವ್ಯವಸ್ಥಿತವಾಗಿ ತಲುಪಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ನಾರಾಯಣ ಗೌಡರದು ಈ ಕಥೆಯಾದರೆ, ಪವಿತ್ರ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಯಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ.
ಹಾಲಿ ಶಾಸಕ ಡಿ.ಟಿ.ರಾಜೇಗೌಡ ಅವರು ಮತದಾರರಿಗೆ ಕುಕ್ಕರ್ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಇದಕ್ಕೆ ತಾವೇನು ಕಮ್ಮಿ ಎಂಬಂತೆ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್, ಸೀರೆಗಳನ್ನು ಹಂಚುತ್ತಿದ್ದಾರೆ. ಪ್ರತಿಯೊಂದು ಸೀರೆಗೆ ಅವರ ಭಾವಚಿತ್ರಗಳನ್ನು ಅಂಟಿಸಿ ಮಹಿಳೆಯರಿಗೆ ವಿತರಣೆ ಮಾಡಲಾಗುತ್ತಿದೆ.
ದೇವೇಗೌಡರು ಅಡಿಗಲ್ಲಿಟ್ಟ ಕಾಮಗಾರಿಗೆ ಮರು ನಾಮಕರಣ : ರೇವಣ್ಣ ಆಕ್ಷೇಪ
ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಬೆಂಬಲಿಗರು ಕೂಡ ಗ್ರಾಮ ಪಂಚಾಯ್ತಿ ಮೂಲಕ ಸೀರೆಗಳನ್ನು ವಿತರಣೆ ಮಾಡುತ್ತಿದ್ದಾರೆ. ಕೆಲವು ಕಡೆ ತಮಗೆ ಸೀರೆ ಕೊಟ್ಟಿಲ್ಲ ಎಂದು ಆಕ್ರೋಶ ಸಹ ಹೊರ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲೂ ಸೀರೆ, ಕುಕ್ಕರ್ ಎಗ್ಗಿಲ್ಲದೆ ಹಂಚಲಾಗುತ್ತಿದೆ. ಇನ್ನು ಕೆಲವು ಕಡೆ ಮತದಾರರನ್ನು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಮೈಸೂರು ಹೀಗೆ ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ಯಲಾಗುತ್ತಿದೆ.
ಒಂದೊಂದು ಬಸ್‍ಗೆ 50-60 ಮತದಾರರನ್ನು ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡಿಸಲು ವ್ಯವಸ್ಥೆ ಮಾಡಿ ತಮಗೇ ಮತ ಹಾಕಬೇಕೆಂದು ಆಣೆ, ಪ್ರಮಾಣ ಮಾಡಿಸಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲೂ ಗಿಫ್ಟ್ ಪಾಲಿಟಿಕ್ಸ್ ಜೋರಾಗಿಯೇ ಕೇಳಿಬಂದಿದೆ. ಶಾಸಕರೊಬ್ಬರು ಈಗಾಗಲೇ ಎಲ್‍ಇಡಿ ಟಿವಿಯನ್ನು ವಿತರಣೆ ಮಾಡಿದ್ದರೆ, ಅವರ ಎದುರಾಳಿ ಅಭ್ಯರ್ಥಿಯು ಟಿವಿ ಹಂಚಲು ಸಜ್ಜಾಗುತ್ತಿದ್ದಾರೆ.
ಮಾ.24ಕ್ಕೆ ಬಸವಣ್ಣ-ಕೆಂಪೇಗೌಡರ ಪ್ರತಿಮೆ ಅನಾವರಣ
ಹೀಗೆ ರಾಜ್ಯದ 224 ಕ್ಷೇತ್ರಗಳಲ್ಲೂ ಮತದಾರರಿಗೆ ಹಲವು ರೀತಿ ಆಮಿಷಗಳನ್ನು ಒಡ್ಡಿ ಮತ ಸೆಳೆಯುವ ಕಸರತ್ತು ಮುಂದುವರೆದಿದೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಮತದಾರರು ಕೂಡ ಬಂದುದ್ದನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದಾರೆ.
assembly, election, gift politics,