ಬೆಂಗಳೂರು,ಆ.5- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದ ಸಂಘಟನೆಯತ್ತ ಗಮನಹರಿಸಿರುವ ಬಿಜೆಪಿ ಲಿಂಗಾಯಿತ- ಒಕ್ಕಲಿಗ ಕಾಂಬಿನೇಷನ್‍ನಲ್ಲಿ ಹೊಸ ತಂಡ ಕಟ್ಟಲು ಮುಂದಾಗಿದೆ. ಒಂದು ದಿನದ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಹಾಲಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಬದಲಾಯಿಸಿ ಒಕ್ಕಲಿಗ, ದಲಿತ ಇಲ್ಲವೇ ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂಗಾಯಿತ ಸಮುದಾಯಕ್ಕೆ ಸೇರಿದರೆ, 2ನೇ ಅತಿದೊಡ್ಡ ಸಮುದಾಯವಾದ ಒಕ್ಕಲಿಗ ಮತಗಳನ್ನು ಸೆಳೆಯಲು ಅದೇ ಸಮುದಾಯಕ್ಕೆ ಸೇರಿದವರನ್ನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕೆಂಬ ಸಲಹೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ದಲಿತ ಸಮುದಾಯದಿಂದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಹಾಲಿ ಇಂಧನ ಸಚಿವ ಸುನೀಲ್‍ಕುಮಾರ್ ಹೆಸರುಗಳು ಹೊಸ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿವೆ.
ಆದರೆ ಚುನಾವಣಾ ವರ್ಷ ಆಗಿರುವುದರಿಂದ ಅರವಿಂದ ಲಿಂಬಾವಳಿ ಪಕ್ಷದ ಜವಾಬ್ದಾರಿ ಹೊತ್ತುಕೊಳ್ಳಲು ಹಿಂದೇಟು ಹಾಕಿದ್ದಾರೆ. ಉಳಿದಂತೆ ಮೂವರು ಮುಖಂಡರಿಗೆ ಸಂಘ ಪರಿವಾರದ ಹಿನ್ನೆಲೆ ಇರುವುದರಿಂದ ಅಧ್ಯಕ್ಷ ಸ್ಥಾನ ಒಲಿದರೂ ಒಲಿಯಬಹುದು.
ಬಿಜೆಪಿಯಲ್ಲಿ ಪದ್ದತಿಯಂತೆ ಮೂರು ವರ್ಷಗಳ ಕಾಲ ರಾಜ್ಯಾಧ್ಯಕ್ಷರ ಅಕಾರಾವ ಇರುತ್ತದೆ. ಹಾಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಅವಧಿಯೂ ಮುಕ್ತಾಯಗೊಳ್ಳುತ್ತಿದ್ದು, ಇದೀಗ ಕಮಲ ಪಕ್ಷಕ್ಕೆ ಹೊಸ ರಾಜ್ಯಾಧ್ಯಕ್ಷ ಯಾರು ಎಂಬ ಕುತೂಹಲ ಶುರುವಾಗಿದೆ.
ನಳೀನ್‍ಕುಮಾರ್ ಕಟೀಲ್ ಉತ್ತಮ ಸಂಘಟಕನಾದರೂ ಮಾಸ್ ಆಗಿ ಜನರನ್ನು ಆಕರ್ಷಿಸಬಹುದಾದ ಶಕ್ತಿ ಹೊಂದಿಲ್ಲ ಎಂಬ ಅಭಿಪ್ರಾಯವಿದೆ. ಉತ್ತರಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ನಳೀನ್‍ಕುಮಾರ್ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದಾರೆ.
ಇದೀಗ ಚುನಾವಣೆ ವರ್ಷವಾಗಿರುವುದರಿಂದ ಮತದಾರರನ್ನು ಸೆಳೆಯಲು ಮಾತುಗಾರಿಕೆಯ ಸಾರಥ್ಯದ ಅಗತ್ಯವಿದೆ ಎಂಬ ಚಿಂತನೆ ಬಿಜೆಪಿಯದ್ದು. ಈ ನಿಟ್ಟಿನಲ್ಲಿ ಉತ್ತಮ ವಾಗ್ಮಿಗೆ ಸಾರಥ್ಯ ನೀಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.
ಈ ನಿಟ್ಟಿನಲ್ಲಿ ಬಹುತೇಕ ಸಿ.ಟಿ.ರವಿ ಹೆಸರು ಮುನ್ನಲೆಗೆ ಬಂದಿದ್ದು, ಸದ್ಯ ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಅವರಿಗೆ ರಾಜ್ಯ ಘಟಕದ ಸಾರಥ್ಯ ನೀಡುವ ಸಾಧ್ಯತೆ ಬಹುತೇಕ ದಟ್ಟವಾಗಿದೆ.
ಇದರ ಜತೆಗೆ ಎಸ್‍ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗದಲ್ಲಿರುವವರ ಹುಡುಕಾಟವೂ ನಡೆದಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.
ಸಿ.ಟಿ.ರವಿ ತಮ್ಮ ಪ್ರಖರ ಮಾತಿನಿಂದ ಗುರುತಿಸಿಕೊಂಡವರು. ಸಂಘದ ಹಿನ್ನೆಲೆಯಿಂದ ಬಂದ ಸಿ.ಟಿ ರವಿ ರಾಷ್ಟ್ರೀಯ ಮಟ್ಟದಲ್ಲೂ ಸಂಘಟನೆಯ ಅನುಭವ ಇದೆ. ಗೋವಾ, ತಮಿಳುನಾಡು ಉಸ್ತುವಾರಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಖರ ಹಿಂದುತ್ವದ ವಿವಾದಾತ್ಮಕ ಹೇಳಿಕೆಗಳಿಂದಲೂ ಸಿ.ಟಿ ರವಿ ಸುದ್ದಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪಟ್ಟ ಕಟ್ಟುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.