ಚುನಾವಣೆಗೆ ಮುನ್ನವೇ ರಾಜಕೀಯ ಪಕ್ಷಗಳ ಪ್ರಚಾರದ ಪೈಪೋಟಿ

Social Share

ಬೆಂಗಳೂರು, ಡಿ.4- ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ರಾಜಕೀಯ ಪಕ್ಷಗಳಿಗೆ ಚುನಾವಣಾ ಜ್ವರ ಶುರುವಾಗಿದೆ. ಬಹುಮತ ಗಳಿಸಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಠಕ್ಕೆ ಬಿದ್ದಿರುವ ಮೂರು ರಾಜಕೀಯ ಪಕ್ಷಗಳು ಜನರ ವಿಶ್ವಾಸಗಳಿಸಲು ಪೈಪೋಟಿಗಿಳಿದಿವೆ.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕಿಂತ ಹೆಚ್ಚಿನ ಗಮನವನ್ನು ವಿಧಾನಸಭೆ ಚುನಾವಣೆ ಕಡೆಗೆ ಹರಿಸಿವೆ. ಅಗತ್ಯವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಗಡಿ ವಿವಾದ, ಮೀಸಲಾತಿ ಬಿಕ್ಕಟ್ಟು, ಕೃಷಿ ಉತ್ಪನ್ನಗಳ ಬೆಲೆ ಕುಸಿತ, ಪ್ರವಾಹ, ಅತಿವೃಷ್ಟಯಿಂದ ಉಂಟಾದ ಹಾನಿಗಳಿಗೆ ಪರಿಹಾರ ಕ್ರಮಗಳು ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳು ರಾಜ್ಯದಲ್ಲಿವೆ.

ಆದರೂ ರಾಜಕೀಯ ಪಕ್ಷಗಳು ಇಂತಹ ಸಮಸ್ಯೆಗಳಿಗಿಂತ ಹೆಚ್ಚಾಗಿ ಚುನಾವಣೆ ಸಿದ್ಧತೆಗೆ ಆದ್ಯತೆ ನೀಡಿದಂತಾಗಿದೆ. ಸಮಸ್ಯೆಗಳ ಚರ್ಚೆಗಿಂತ ರಾಜಕೀಯವಾದ ವಿಚಾರಗಳೇ ವಿಜೃಂಭಿಸುತ್ತಿವೆ. ಅಲ್ಲದೆ, ಹೆಚ್ಚು ಚರ್ಚೆಯಾಗುತ್ತಿವೆ.
ಚುನಾವಣೆಗೂ ಮುನ್ನವೇ ಜನಮನ ಗೆಲ್ಲಲು ರಾಜಕೀಯ ಪಕ್ಷಗಳು ಹರ ಸಾಹಸ ಮಾಡುತ್ತಿವೆ.

ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಜಾಗತಿಕ ಬೆಂಬಲ

ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮದೇ ಆದ ತಂತ್ರಗಳ ಮೂಲಕ ಈಗಾಗಲೇ ಚುನಾವಣಾ ಅಖಾಡಕ್ಕಿಳಿದಿವೆ. ಆಡಳಿತದ ಪರವಾದ ಅಲೆ ಸೃಷ್ಟಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದ್ದರೆ, ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಪ್ರತಿಪಕ್ಷಗಳು ಹವಣಿಸುತ್ತಿವೆ.

ರಾಜ್ಯದಲ್ಲಿ ಅನುಷ್ಠಾನಗೊಳಿಸಿರುವ ಜನಪರ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭಿಸಿದೆ. ಅಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿಗೊಳಿಸುವ ಭರವಸೆಯೊಂದಿಗೆ ಜೆಡಿಎಸ್ ಪಂಚರತ್ನ ರಥಯಾತ್ರೆ ಕೈಗೊಂಡಿದೆ.

ಈಗಾಗಲೇ ಭಾರತ ಐಕ್ಯಯಾತ್ರೆಯನ್ನು ರಾಜ್ಯದಲ್ಲಿ ಪೂರ್ಣಗೊಳಿಸಿರುವ ಕಾಂಗ್ರೆಸ್ ಮತ್ತೊಂದು ರಥಯಾತ್ರೆಗೆ ಸಿದ್ಧತೆ ನಡೆಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಪ್ರತ್ಯೇಕವಾಗಿ ರಥಯಾತ್ರೆ ಕೈಗೊಳ್ಳಲಿದ್ದಾರೆ.

ಹೀಗೆ ಮೂರು ಪಕ್ಷಗಳು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರಕ್ಕೆ ಬರಬೇಕೆಂಬ ಹಂಬಲ ಹೊಂದಿವೆ. ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಣಾಳಿಕೆ ತಯಾರಿ, ಜನಪರ ಯಾತ್ರೆಗಳಲ್ಲಿ ನಿರತವಾಗಿವೆ. ಪದೇ ಪದೇ ಸಮೀಕ್ಷೆಗಳ ಮೂಲಕ ಜನರ ನಾಡಿ ಮಿಡಿತ ಅರಿಯುವ ಪ್ರಯತ್ನ ಮಾಡುತ್ತಿವೆ.

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಶೋಭಯಾತ್ರೆಗೆ ಪೊಲೀಸರ ಬಿಗಿ ಬಂದೋಬಸ್ತ್

ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 123 ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಗುರಿಯೊಂದಿಗೆ ಪ್ರಚಾರ ಆರಂಭಿಸಿದ್ದರೆ; ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಉದ್ದೇಶ ಹೊಂದಿವೆ.

ಈ ಗುರಿ ಸಾಧನೆಗೆ ಆಯಾ ಪಕ್ಷದ ಹೈಕಮಾಂಡ್‍ಗಳು ಕಾಲ ಕಾಲಕ್ಕೆ ಮಾರ್ಗದರ್ಶನ ಮಾಡುತ್ತಿವೆ. ಗುಜರಾತ್ ಚುನಾವಣೆ ಮುಗಿಯುತ್ತಿದ್ದಂತೆ ಎರಡೂ ಪಕ್ಷಗಳ ನಾಯಕರು ರಾಜ್ಯದಲ್ಲಿ ಠೀಕಾಣಿ ಹೂಡಿ ಚುನಾವಣಾ ಕಾರ್ಯತಂತ್ರಗಳಲ್ಲಿ ಸಕ್ರಿಯವಾಗುವ ಸಾಧ್ಯತೆ ಹೆಚ್ಚಾಗಿದೆ.

ಅನ್ನಭಾಗ್ಯಕ್ಕೆ ಕನ್ನ : ನಕಲಿ ನ್ಯಾಯಬೆಲೆ ಅಂಗಡಿಗಳಿಂದ ರೇಷನ್ ಎತ್ತುವಳಿ

ತಮ್ಮ ಆಡಳಿತಾವಧಿಯಲ್ಲಿ ಮಾಡಿರುವ ಸಾಧನೆಗಳನ್ನು ಜನರ ಮುಂದಿಟ್ಟು ಮತದಾರರ ಮನಗೆಲ್ಲುವ ಕಾರ್ಯದಲ್ಲಿ ಮಗ್ನವಾಗಿವೆ. ಆದರೂ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇದರ ನಡುವೆ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಯಾವ ಪಕ್ಷ ಸೂಕ್ತ ಎಂಬ ಜಿಜ್ಞಾಸೆಯಲ್ಲಿ ರಾಜಕೀಯ ಮುಖಂಡರು ತೊಡಗಿದ್ದಾರೆ.

#Assembly #Election, #Political, #parties, #Campaign,

Articles You Might Like

Share This Article