ಮತದಾರರಿಗೆ ತೀರ್ಥಯಾತ್ರೆ, ಪ್ರವಾಸ, ಭರ್ಜರಿ ಉಡುಗೊರೆಗಳ ಭಾಗ್ಯ

Social Share

ಬೆಂಗಳೂರು,ನ.25-ರಾಜ್ಯ ವಿಧಾನಸಭೆಗೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಂತೆ ಮತದಾರರ ಮೂಗಿಗೆ ತುಪ್ಪ ಸವರಲು ಆಕಾಂಕ್ಷಿಗಳು ನಾನಾ ರೀತಿಯ ಆಮಿಷಗಳನ್ನೊಡುತ್ತಿದ್ದಾರೆ.

ಹಾಲಿ ಸಚಿವರು, ಶಾಸಕರು ಹಾಗೂ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಖಾತ್ರಿಯಲ್ಲಿರುವ ಆಕಾಂಕ್ಷಿಗಳು ಮತದಾರರಿಗೆ ಉಚಿತವಾಗಿ ಉಡುಗೊರೆ ತೀರ್ಥಯಾತ್ರೆ, ಪ್ರವಾಸ, ಕ್ರೀಡಾಕೂಟಗಳ ಆಯೋಜನೆ, ರಸಮಂಜರಿ ಕಾರ್ಯಕ್ರಮ, ಹಬ್ಬಹರಿದಿನಗಳಲ್ಲಿ ಯಥೇಚ್ಚವಾಗಿ ಹಣ ನೀಡುವುದು ಸೇರಿದಂತೆ ನಾನಾ ರೀತಿಯ ಭರವಸೆಗಳನ್ನು ನೀಡುತ್ತಿದ್ದಾರೆ.

ಇನ್ನೇನು ಚುನಾವಣೆ ಸಮೀಪಿಸುತ್ತಿರುವುದರಿಂದ ಬಹುತೇಕ 224 ಕ್ಷೇತ್ರಗಳಲ್ಲಿ ಮತದಾರರಿಗೆ ಆಮಿಷವೊಡ್ಡುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ರೀತಿಯಲ್ಲಿ ಮತದಾರರನ್ನು ಮುಂಗಡವಾಗಿಯೇ ಬುಕ್ ಮಾಡಿಕೊಳ್ಳುವ ತಂತ್ರವನ್ನು ರೂಪಿಸುತ್ತಿದ್ದಾರೆ.

ಬಿಬಿಎಂಪಿಯಿಂದ ‘ನನ್ನ ನಗರ ನನ್ನ ಬಜೆಟ್’ ಅಭಿಯಾನಕ್ಕೆ ಚಾಲನೆ

ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಧಾನಿ ಬೆಂಗಳೂರು, ಬೆಳಗಾವಿ, ಕಲಬುರಗಿ, ಬಳ್ಳಾರಿ, ಮೈಸೂರು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಸಚಿವರು, ಶಾಸಕರು, ಆಕಾಂಕ್ಷಿಗಳು, ಸಮಾಜಸೇವೆ ನೆಪದಲ್ಲಿ ಮತದಾರರನ್ನುಆಕರ್ಷಿಸಲು ನಾನಾ ಸರ್ಕಸ್ ಮಾಡುತ್ತಿದ್ದಾರೆ.

ಮತದಾರರನ್ನು ಸೆಳೆಯಲು ಬಗೆಬಗೆಯ ಉಡುಗೊರೆಯನ್ನು ಕೊಡುತ್ತಿದ್ದು, ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಶಾಲಾ ಬ್ಯಾಗ್, ಟಿಫನ್ ಬಾಕ್ಸ್, ಟಿಫನ್ ಕ್ಯಾರಿಯರ್, ಶೂನಿಂದ ಹಿಡಿದು, ಮನೆಗೆ ಗಡಿಯಾರ, ವಾಚು, ಸೀರೆ, ಕನ್ನಡಕಗಳನ್ನು ಹಂಚುತ್ತಿದ್ದಾರೆ. ಮತದಾರರೂ ಕೂಡ ಸಿಕ್ಕಿದ್ದೇ ಚಾನ್ಸ್ ಎಂದು ಬಂದಿದ್ದನ್ನೆಲ್ಲ ಬಾಚಿಕೊಳ್ಳುತ್ತಿದ್ದಾರೆ.

ಈ ಹಿಂದೆ ಕೋವಿಡ್ ಸಂದರ್ಭದಲ್ಲೂ ಅಕ್ಕಿ, ಬೇಳೆ, ಬೆಲ್ಲ, ಗೋ, ಮೈದಹಿಟ್ಟು, ಧವಸಧಾನ್ಯಗಳನ್ನು ನೀಡಿ ತಮಗೆ ಬರುವ ಚುನಾವಣೆಯಲ್ಲಿ ಮತ ಹಾಕಬೇಕೆಂದು ಪಕ್ಷೋವಾಗಿ ಜನಪ್ರತಿನಿಧಿಗಳು ಸಹಾಯಕ ಮಾಡುವ ನೆಪದಲ್ಲಿ ಮತದಾರರಿಗೆ ಆಮಿಷವೊಡ್ಡಿದ್ದರು.

ಈಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಮತದಾರರ ಸೆಳೆಯಲು ನಾನಾ ಕಸರತ್ತು ನಡೆಸುವುದು ಸಾಮಾನ್ಯವಾಗಿದೆ.

ಗ್ರಾಮಗಳಲ್ಲಿರುವ ಆಯಾ ಪಕ್ಷಗಳಿಗೆ ಸೇರಿದ ಪ್ರಮುಖರ ಮೂಲಕ ರಾಜಕೀಯ ನಾಯಕರು ಕ್ರಿಕೆಟ್ ಟೂರ್ನಮೆಂಟ್, ವಾಲಿಬಾಲ್, ಕಬ್ಬಡಿ ಸೇರಿದಂತೆ ಮತ್ತಿತರ ಕ್ರೀಡೆಗಳನ್ನು ಆಯೋಜಿಸಿದರೆ, ಹಬ್ಬಗಳ ಸಂದರ್ಭದಲ್ಲಿ ರಸಮಂಜರಿ ಕಾರ್ಯಕ್ರಮಕ್ಕೆ ಹಣ ಚೆಲ್ಲಲು ನಾ ಮುಂದು, ನೀ ಮುಂದು ಎಂದು ಮುಂದೆ ಬರುತ್ತಿದ್ದಾರೆ.

ಮತದಾರರನ್ನು ಸೆಳೆಯಲು ಕಾಂಗ್ರೆಸ್-ಬಿಜೆಪಿಯ ನಾಯಕರು ಹಠಕ್ಕೆ ಬಿದ್ದಂತೆ ನಾನಾ ತರಹದ ಗಿಫ್ಟ್‍ಗಳನ್ನು ಹಂಚುತಿದ್ದರೆ, ಕಾಂಗ್ರೆಸ್ ಶಾಸಕರಾದ ಲಕ್ಷ್ಮಿ ಹೆಬ್ಬಾಳ, ಅಂಜಲಿ ನಿಂಬಾಳ ಚುನಾವಣೆ ಸಮಯದಲ್ಲಿ ಅರಿಶಿಣ-ಕುಂಕುಮದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಚುನಾವಣೆಗೆ ಸಿದ್ಧ, ಒಂದೇ ಕ್ಷೇತ್ರಕ್ಕೆ ಬದ್ಧ: ಸಿದ್ದರಾಮಯ್ಯ

ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಮಹಿಳೆಯರನ್ನು ಆಹ್ವಾನಿಸಿ ಅರಿಶಿಣ-ಕುಂಕುಮ ಜತೆಗೆ ಟಿಫಿನ್ ಬಾಕ್ಸ್‍ಗಳನ್ನು ಹಂಚುತ್ತಿದ್ದಾರೆ. ಆ ಮೂಲಕ ಮಹಿಳಾ ಮತದಾರರನ್ನು ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ.

ಇನ್ನು ಖಾನಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಡಾ.ಸೋನಾಲಿ ಸರನೋಬಾತ್, ಕನ್ನಡಕ ವಿತರಣೆ ಮಾಡುತ್ತಿದ್ದರೆ, ದಿಲೀಪ್ ಕುಮಾರ್ ಸೀರೆ, ಅರಿಶಿಣ-ಕುಂಕುಮ ಇರುವ ಕಿಟ್‍ಗಳನ್ನು ಮತದಾರರಿಗೆ ನೀಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಸದಸ್ಯೆ ಆಯಿಶಾ ಸನದಿ, ನಾವು ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ ಜನರಿಗೆ ಬೇಕಾದ ವಸ್ತುಗಳನ್ನು ಮೊದಲಿನಿಂದಲೂ ಕೊಡುತ್ತಿದ್ದೇವೆ. ಬಿಜೆಪಿಯವರ ರೀತಿ ಶೇ. 40ರಷ್ಟು ಕಮಿಷನ್ ಹೊಡೆದು ಜನರಿಗೆ ಗಿಫ್ಟ್ ಕೊಡುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಸವದತ್ತಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿಶ್ವಾಸ ವೈದ್ಯ ಕೂಡ ವಧುವಿಗೆ ಬೇಕಾದ ಗಾಡೇಜ್, ಬಾಂಡೆಗಳಿರುವ ಕಿಟ್ ಹಂಚುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು ಶತಾಯಗತಾಯವಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಕಸರತ್ತು ಆರಂಭಿಸಿದ್ದಾರೆ.

ಬಿಜೆಪಿ ಶಾಸಕ ಅಭಯ್ ಪಾಟೀಲ ಹಾಗೂ ಅನಿಲ್ ಬೆನಕೆ ಅವರು ಕೂಡ ಯುವ ಸಮೂಹವನ್ನು ಗುರಿಯಾಗಿಟ್ಟುಕೊಂಡು ಮತಬೇಟೆ ಆರಂಭಿಸಿದ್ದಾರೆ. ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಅನುಕೂಲವಾಗುವ ಪುಸ್ತಕಗಳನ್ನು ಸಿದ್ಧಪಡಿಸಿ ನಗರದ ಎಲ್ಲ ಪಿಯು ವಿದ್ಯಾರ್ಥಿಗಳಿಗೆ ಹಂಚುತ್ತಿದ್ದಾರೆ.

assembly, election, tour, gift, voters,

Articles You Might Like

Share This Article