ಬೆಂಗಳೂರು,ಆ.16- ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುವ ಲಕ್ಷಣಗಳು ಕಂಡುಬರುತ್ತಿದ್ದು, 2023ರ ವಿಧಾನ ಸಭಾ ಚುನಾವಣೆಗೆ ಕೇವಲ ಎಂಟು ತಿಂಗಳಷ್ಟೆ ಬಾಕಿಯಿದೆ. ಹೀಗಾಗಿ ಡಿಸೆಂಬರ್ ತಿಂಗಳ ಬಳಿಕ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಮುನ್ನಲೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.
ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಒಂದಷ್ಟು ಶಾಸಕರು, ನಾಯಕರು ಭಿನ್ನಾಭಿಪ್ರಾಯ ಹೊಂದಿದ್ದು, ತಮ್ಮ ಪಕ್ಷದ ವಿರುದ್ಧವೇ ಹರಿಹಾಯ್ದವರು ಸದ್ಯಕ್ಕೆ ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿಯಲ್ಲಿಯೂ ಒಂದಷ್ಟು ಆಕ್ರೋಶಿತ ನಾಯಕರಿದ್ದಾರೆ. ಆದರೆ ಇವರೆಲ್ಲರೂ ಇದೀಗ ಮೌನಕ್ಕೆ ಶರಣಾಗಿದ್ದಾರೆ.
ಈಗಾಗಲೇ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವವರು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದರೂ ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಲು ತಯಾರಿಲ್ಲ. ಕಾರಣ ಒಂದು ವೇಳೆ ಹಾಗೇನಾದರೂ ಮಾಡಿದ್ದರೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆದು ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಭಯ ಅವರನ್ನು ಕಾಡುತ್ತಿರುವುದರಿಂದ ಅವಧಿ ಮುಗಿಸುವ ಸಲುವಾಗಿ ತೆಪ್ಪಗಾಗಿದ್ದಾರೆ.
ಪಕ್ಷ ನಿಷ್ಠೆ ಮೆರೆಯುತ್ತಾ ಐದಾರು ಬಾರಿ ತಮ್ಮ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾ ಬಂದಿದ್ದರೂ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ತಮಗೆ ಸಚಿವ ಸ್ಥಾನ ಸಿಗದಿದ್ದರೂ ತಳಮಟ್ಟದಿಂದ ಬಂದು ಒಂದೊಂದೇ ಹಂತವನ್ನೇರಿ ಪಕ್ಷದಲ್ಲಿ ಉಳಿದಿರುವ ಹಲವು ನಾಯಕರು ತಮ್ಮ ಆಕ್ರೋಶವಿದ್ದರೂ ಪಕ್ಷದಲ್ಲಿಯೇ ಉಳಿದು ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ.
ಇನ್ನು ಹಲವು ನಾಯಕರು ಪಕ್ಷದಲ್ಲಿ ಪ್ರಭಾವಿಗಳಾಗಿರುವುದರಿಂದ ಕ್ಷೇತ್ರ ಬದಲಾಯಿಸಿ ಮತ್ತೊಂದು ಕ್ಷೇತ್ರದಲ್ಲಿ ಗೆಲುವು ಪಡೆಯುವ ತಾಕತ್ ಹೊಂದಿದ್ದಾರೆ. ಅಂಥವರು ಪ್ರತಿ ಬಾರಿಯ ಅಧಿಕಾರ ಅನುಭವಿಸುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಚುನಾವಣೆ ಸನಿಹದಲ್ಲಿರುವಾಗಲೇ ಬಿಜೆಪಿಯಲ್ಲಿ ಆಗಿರುವ ಕೆಲವೊಂದು ಬೆಳವಣಿಗೆಗಳು ಪಕ್ಷದ ನಾಯಕರಲ್ಲಿ ಭಯವನ್ನುಂಟು ಮಾಡಿದೆ.
ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಹಿಂದೂ ಕಾರ್ಯಕರ್ತರು ಮತ್ತು ಮುಖಂಡರು ತಿರುಗಿ ಬಿದ್ದಿರುವುದು ಮತ್ತು ಅವರೆಲ್ಲರೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿರುವುದು ನಿಜಕ್ಕೂ ಬಿಜೆಪಿಯಲ್ಲಿ ತಲ್ಲಣ ಉಂಟು ಮಾಡಿದೆ.
ಚುನಾವಣೆ ಸಂದರ್ಭದಲ್ಲೇ ಕಾರ್ಯಕರ್ತರು ತಿರುಗಿಬಿದ್ದಿದ್ದು ಬಿಜೆಪಿ ನಾಯಕರಿಗೊಂದು ಆಘಾತವಾಗಿದ್ದು, ಇದನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ನಾಯಕರಿಗೆ ಸವಾಲ್ ಎಂದರೂ ತಪ್ಪಾಗಲಾರದು.
ಹಿಂದುತ್ವದ ಭದ್ರ ಬುನಾದಿಯಲ್ಲಿ ಸೃಷ್ಟಿಯಾದ ಬಿಜೆಪಿ ಪಕ್ಷವು ಇತ್ತೀಚೆಗಿನ ವರ್ಷಗಳಲ್ಲಿ ಕೇವಲ ಅಧಿಕಾರಕ್ಕಾಗಿ ತಮ್ಮ ಸಿದ್ಧಾಂತವನ್ನು ಬದಿಗೊತ್ತಿ ಅಧಿಕಾರ ಹಿಡಿದಿದ್ದು, ಅಧಿಕಾರಕ್ಕೆ ಬಂದ ಬಳಿಕ ತಮಗೆ ಭದ್ರಬುನಾದಿಯಾಗಿದ್ದ ಕಾರ್ಯಕರ್ತರನ್ನು ಮರೆತು ಮೆರೆದಿದ್ದು ಇವತ್ತಿನ ಪರಿಸ್ಥಿತಿಗೆ ಕಾರಣವಾಗಿದೆ.
ಒಂದು ವೇಳೆ ಕಾರ್ಯಕರ್ತರು ತಿರುಗಿ ಬೀಳದೆ ಹೋಗಿದ್ದರೆ ಪ್ರವೀಣ್ ನೆಟ್ಟಾರು ಹತ್ಯೆ ಕೂಡ ಮುಂದಿನ ಚುನಾವಣೆಯಲ್ಲಿ ಮತ ತಂದು ಕೊಡುವ ಫಸಲು ಆಗುತ್ತಿತ್ತೇನೋ ಆದರೆ ಕಾರ್ಯಕರ್ತರ ಸಹನೆಯ ಕಟ್ಟೆಯೊಡೆದರೆ ಏನಾಗುತ್ತದೆ ಎಂಬುದಕ್ಕೆ ಇದು ನಿದರ್ಶನವಾಗಿದೆ.
ಬೇರೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದ ಕೆಲವು ನಾಯಕರು ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿಯತ್ತ ಮುಖ ಮಾಡುವ ಆಲೋಚನೆ ಮಾಡಿದ್ದರು. ಆದರೆ ಬಿಜೆಪಿಯಲ್ಲಿನ ಬೆಳವಣಿಗೆ ಅವರು ಕಾದು ನೋಡುವ ತಂತ್ರ ಅನುಸರಿಸುವಂತೆ ಮಾಡಿದೆ.
ಸದ್ಯಕ್ಕೆ ಮಂಕಾಗಿರುವ ಬಿಜೆಪಿಗೆ ಚುರುಕು ಮುಟ್ಟಿಸಲೆಂದೇ ಚುನಾವಣಾ ಚಾಣಕ್ಯ ಅಮಿತ್ ಶಾ ಬಂದು ಹೋಗಿದ್ದಾರೆ. ಮುಂದಿನ ಬೆಳವಣಿಗೆಗಳು ಹೇಗಿವೆಯೋ ಗೊತ್ತಿಲ್ಲ. ಈ ಹಿಂದೆಯಿದ್ದ ಸಮ್ಮಿಶ್ರ ಸರ್ಕಾರದಿಂದ ಸಿಡಿದೆದ್ದು ಬಂದ ಶಾಸಕರು ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯಲ್ಲಿಯೇ ಇರುತ್ತಾರಾ? ಅಥವಾ ಪಕ್ಷ ನಿಷ್ಠೆ ಬದಲಾಯಿಸುತ್ತಾರೋ ಗೊತ್ತಿಲ್ಲ. ಆದರೆ ಅವರ ಕಾರ್ಯವನ್ನು ಹೈಕಮಾಂಡ್ ಹೊಗಳಿರುವುದು ಸಮಾಧಾನ ತಂದಿದೆ.
ಇನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಲ್ಲಿ ಅಸಮಾಧಾನಗೊಂಡ ಶಾಸಕರು ಬಿಜೆಪಿಯತ್ತ ಒಲವು ತೋರಿದ್ದರಾದರೂ ಈಗಿನ ಬೆಳವಣಿಗೆಯಲ್ಲಿ ಅವರು ಯಾವುದೇ ನಿರ್ಧಾರಕ್ಕೆ ಬಂದಂತೆ ಕಾಣುತ್ತಿಲ್ಲ. ಅವರದ್ದೇನಿದ್ದರೂ ಈಗ ಕಾದು ನೋಡುವ ತಂತ್ರವಾಗಿದೆ.
ಜೆಡಿಎಸ್‍ನ ಅಸಮಾಧಾನಿತ ಶಾಸಕರ ಪೈಕಿ ಜಿ.ಟಿ.ದೇವೇಗೌಡರು ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಕೊನೆಗಳಿಗೆಯ ತನಕವೂ ಕಾಯುವ, ಒಂದು ವೇಳೆ ಯಾವ ಪಕ್ಷಕ್ಕೂ ಹೋಗದೆ ಪಕ್ಷೇತರರಾಗಿ ಗೆಲ್ಲುವ ಸಾಮಥ್ರ್ಯವೂ ಅವರಲ್ಲಿದೆ. ಈ ನಡುವೆ ಜೆಡಿಎಸ್ ಶಾಸಕ ಒಂದು ಕಾಲದ ವೈರಿ ಸಾ.ರಾ.ಮಹೇಶ್ ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಸಂಧಾನ ಎಂಬುದು ಗೊತ್ತಿಲ್ಲ. ಹೀಗಾಗಿ ಕೊನೆಗಳಿಗೆಯಲ್ಲಿ ಜಿ.ಟಿ.ದೇವೇಗೌಡರು ಜೆಡಿಎಸ್ ನಲ್ಲೇ ಉಳಿದರೂ ಅಚ್ಚರಿ ಪಡಬೇಕಾಗಿಲ್ಲ.
ಇನ್ನು ಅರಸೀಕರೆ ಶಾಸಕ ಶಿವಲಿಂಗೇಗೌಡರು ಜೆಡಿಎಸ್ ನಾಯಕರೊಂದಿಗೆ ಸಂಬಂಧ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ನೊಂದಿಗೆ ಸಖ್ಯ ಹೊಂದಿದ್ದಾರೆ. ಸಿದ್ದರಾಮೋತ್ಸವಕ್ಕೆ ತೆರಳುವ ಕಾರ್ಯಕರ್ತರಿಗೆ ಸಹಾಯ ಮಾಡುವ ಮೂಲಕವೂ ಗಮನಸೆಳೆದಿದ್ದಾರೆ.
ಆದರೆ ಅವರು ಕೂಡ ಸದ್ಯಕ್ಕೆ ಜೆಡಿಎಸ್ ಬಿಟ್ಟು ಹೊರ ಬಾರದೆ ಚುನಾವಣೆ ತನಕವೂ ಕಾಯುವ ತಂತ್ರದಲ್ಲಿದ್ದಾರೆ. ಕಾಂಗ್ರೆಸ್ ನ ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರು ಕೂಡ ಅಸಮಾಧಾನಗೊಂಡಿದ್ದಾರೆ.