ವಿಧಾನಸಭೆ ಚುನಾವಣೆಗೆ ಬಿಎಸ್‍ವೈ ಮುಂದಾಳತ್ವ, ಸಿದ್ದು ಅಸ್ತ್ರಕ್ಕೆ ಬಿಜೆಪಿ ಪ್ರತ್ಯಸ್ತ್ರ

Social Share

ಬೆಂಗಳೂರು, ಆ.18- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಪಸ್ಥಿತಿಯಲ್ಲಿ ಕರ್ನಾಟಕದಲ್ಲಿ ಚುನಾವಣೆ ಎದುರಿಸುವುದು ಅಸಾಧ್ಯ ಎಂಬ ಸತ್ಯ ಅರಿತಿರುವ ಕೇಂದ್ರ ಬಿಜೆಪಿ ನಾಯಕರು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿದೆ ಎಂಬ ಮಾತುಗಳು ಕೇಸರಿ ಪಾಳಯದಲ್ಲಿ ಹಬ್ಬಿದೆ.

ಕೆಲ ದಿನಗಳ ಹಿಂದೆ ರಾಜಕೀಯ ನಿವೃತ್ತಿ ಮಾತಗಳನ್ನಾಡಿದ್ದ ಬಿಎಸ್‍ವೈ ಅವರಿಗೆ ಇದೀಗ ಪಕ್ಷದಲ್ಲಿ ಉನ್ನತ ಸ್ಥಾನ ಕಲ್ಪಿಸಿರುವುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಪಕ್ಷದ ಬೆನ್ನಿಗೆ ಬೆಂಬಲವಾಗಿ ನಿಂತಿರುವ ಲಿಂಗಾಯತ ವೋಟ್ ಬ್ಯಾಂಕ್ ಸಂರಕ್ಷಣೆ ನೀಡಿ ಟಿಕೆಟ್ ಹಂಚಿಕೆಯಲ್ಲೂ ಯಡಿಯೂರಪ್ಪ ಅಭಿಪ್ರಾಯಕ್ಕೆ ಮನ್ನಣೆ ನೀಡುವ ಮೂಲಕ
ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಪ್ಲಾನ್ ಹೈಕಮಾಂಡ್ ಮಾಡಿದಂತಿದೆ.

ಯಡಿಯೂರಪ್ಪ ಮುಂದಿಟ್ಟುಕೊಂಡು ಮತ್ತೆ ಅಧಿಕ್ಕಾರಕ್ಕೇರುವುದಕ್ಕೆ ಬಿಜೆಪಿ ಅಸ್ತ್ರ ಪ್ರಯೋಗಿಸಿದ್ದು, ಅವರ ಮುಂದಾಳತ್ವದಲ್ಲಿ ಸಾಮೂಹಿಕ ನಾಯಕತ್ವದ ಜಪಮಾಡಿ ಸಿದ್ದರಾಮಯ್ಯ ಮಾಸ್ ಇಮೇಜ್ ಎದುರು ಬಿಎಸ್‍ವೈ ಮಾಸ್ ಇಮೇಜ್ ಅಸ್ತ್ರ ಬೀಸಿದೆ.

ಈ ಹಿಂದೆ ಯಡಿಯೂರಪ್ಪ ಆಪ್ತ ಬಣದ ನಾಯಕರಲ್ಲಿ ಅಸಮಾಧಾನ ಕೇಳಿಬಂದಿತ್ತು. ಈ ಅಸಮಾಧಾನ ಶಮನಕ್ಕೆ ಹೈಕಮಾಂಡ್ ಮುಂದಾದಂತಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಬಿಜೆಪಿ ರಾಜ್ಯ ನಾಯಕರು ಹೋದ ಕಡೆಯಲ್ಲಿ ಡಂಗೂರ ಬಾರಿಸುತ್ತಿದ್ದರು.

ವಾಸ್ತವದಲ್ಲಿ ಬೊಮ್ಮಾಯಿ ನಂಬಿಕೊಂಡು ಚುನಾವಣೆಗೆ ಹೋದರೆ ಬಿಜೆಪಿ ಪಕ್ಷ ನೆಲ ಕಚ್ಚುವುದು ನಿಶ್ಚಿತ ಎಂಬ ಸತ್ಯವನ್ನು ಅರಿತ ಕೇಂದ್ರ ಬಿಜೆಪಿ ನಾಯಕರು ಯಡಿಯೂರಪ್ಪ ಅವರಿಗೆ ಮನ್ನಣೆ ನೀಡಲು ಚಿಂತನೆ ನಡೆಸಿದ್ದರು. ರಾಜ್ಯದಲ್ಲಿ ತನ್ನ ಪುತ್ರ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸುವ ಬಿ.ಎಸ್. ಯಡಿಯೂರಪ್ಪ ಪ್ರಯತ್ನ ವಿಫಲವಾಗಿತ್ತು.

ವಿಧಾನ ಪರಿಷತ್ ಸದಸ್ಥ ಸ್ಥಾನ ಕೊಡಿಸಲು ವಿಫಲವಾಗಿದ್ದರು. ಆ ಬಳಿಕ ಉಪ ಚುನಾವಣಾ ಉಸ್ತುವಾರಿಯಿಂದಲೂ ವಿಜಯೇಂದ್ರ ಅವರನ್ನು ದೂರ ಇಡಲಾಗಿತ್ತು. ಇದರಿಂದ ಬಿ.ಎಸ್. ಯಡಿಯೂರಪ್ಪ ಮುನಿಸಿಕೊಂಡಿದ್ದರು.

ವಯೋಸಹಸ ಕಾರಣ ನೀಡಿ ಬಿ.ಎಸ್. ಯಡಿಯುರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲಾಯಿತು. ಜನಪರ ಆಡಳಿತ ನೀಡುವ ಮೂಲಕ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಬಿಜೆಪಿ ಕೇಂದ್ರ ವರಿಷ್ಠರು ಯಡಿಯೂರಪ್ಪ ಅವರನ್ನು ಬದಲಿಸಿದ್ದರು. ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಖುರ್ಚಿಯಲ್ಲಿ ಕೂರಿಸಿದ್ದರು.

ಬೊಮ್ಮಾಯಿ ಸರ್ಕಾರ ಬಂದು ವರ್ಷ ತುಂಬಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ ವರ್ಚಸ್ಸು ಸಂಪೂರ್ಣ ಕುಸಿದಿದೆ. ಈ ಹಂತದಲ್ಲಿ ಚುನಾವಣೆ ಎದುರಿಸಿದ್ರೆ ಬಿಜೆಪಿ ಮಕಾಡೆ ಮಲಗುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಉನ್ನತ ಸ್ಥಾನ ನೀಡುವ ಮೂಲಕ ಯಡಿಯೂರಪ್ಪ ಅವರ ಬೇಸರವನ್ನು ಶಮನ ಮಾಡುವ ಪ್ರಯತ್ನ ಕೇಂದ್ರ ವರಿಷ್ಠರು ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಎಸ್ ವೈ ಅವರ ಮುಂದಾಳತ್ವದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ನಿರ್ಧರಿಸಿದಂತೆ ಕಾಣುತ್ತಿದೆ.

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಗೆ ಸದಸ್ಯರನ್ನಾಗಿ ನೇಮಕ ಮಾಡಿದ ಕೇಂದ್ರ ವರಿಷ್ಠರಿಗೆ ಯಡಿಯೂರಪ್ಪ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಮಾತುಗಳನ್ನಾಡಿದ್ದ ಬಿಎಸ್‍ವೈ ಅವರು ಇದೀಗ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾಗುವ ಮೂಲಕ ಬಿಜೆಪಿ ಪಕ್ಷದ ನಿರ್ಧಾರ ಕೈಗೊಳ್ಳುವ ನಾಯಕರ ಸಾಲಿನಲ್ಲಿ ಸೇರ್ಪಡೆಯಾಗಿದ್ದಾರೆ.

ಇದರ ಬೆನ್ನಲ್ಲೇ ಕೇಂದ್ರ ಬಿಜೆಪಿ ವರಿಷ್ಠ ಅಮಿತ್ ಷಾ ಅವರು ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಇದಕ್ಕೆ ನಿಮ್ಮ ಮುಂದಾಳತ್ವ ಇರಬೇಕು ಎಂದು ಮನವಿ ಮಾಡಿದ್ದರು. ತನಗೆ ಹಾಗೂ ತನ್ನ ಪುತ್ರನಿಗೆ ಪಕ್ಷದಲ್ಲಿ ಆದ್ಯತೆ ನೀಡದ ಬಗ್ಗೆ ಯಡಿಯೂರಪ್ಪ ಅವರು ಅಮಿತ್ ಷಾಗೆ ವಿವರಿಸಿದ್ದರು.

ಇದಕ್ಕೂ ಮೊದಲಿನ ಬೆಳವಣಿಗೆ ಗಮನಿಸಿದಾಗ, ಬಿ.ಎಸ್. ಯಡಿಯೂರಪ್ಪ ಚುನಾವಣಾ ಕಣದಿಂದ ದೂರ ಸರಿಯುವ ನಿವೃತ್ತಿ ಘೋಷಣೆ ಮಾಡಿದ್ದರು. ಶಿಕಾರಿಪುರ ಕ್ಷೇತ್ರವನ್ನು ತನ್ನ ಪುತ್ರ ವಿಜಯೇಂದ್ರ ಅವರಿಗೆ ಬಿಟ್ಟು ಕೊಡುತ್ತಿರುವುದಾಗಿ ಪ್ರಕಟಿಸಿದ್ದರು. ಬಿ.ಎಸ್.ವೈ ಅವರ ಈ ನಿರ್ಧಾರ ಬಿಜೆಪಿ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲ ವಿಲ್ಲದೇ ರಾಜ್ಯದಲ್ಲಿ ಬಿಜೆಪಿ ಚುನಾವಣೆ ಎದುರಿಸುವುದು ಕಷ್ಟಸಾಧ್ಯ ಎಂಬ ಚರ್ಚೆಗಳು ಪಕ್ಷದಲ್ಲಿ ಮುನ್ನೆಲೆಗೆ ಬಂದಿದ್ದವು.

Articles You Might Like

Share This Article