ಉತ್ತರಾಖಂಡ್, ಗೋವಾದಲ್ಲಿ ಬಿರುಸಿನ ಮತದಾನ

Social Share

ಡೆಹ್ರಾಡೂನ್,ಫೆ.14- ಉತ್ತರಾಖಂಡ್‍ನ 70 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಗ್ಗೆ ಬಿರುಸಿನ ಮತದಾನ ನಡೆಯಿತು. ಈ 70 ಕ್ಷೇತ್ರಗಳು 13 ಜಿಲ್ಲೆಗಳಲ್ಲಿ ಹರಡಿಕೊಂಡಿವೆ. 2000ರಲ್ಲಿ ರಾಜ್ಯ ಸ್ಥಾನಮಾನ ಪಡೆದ ಬಳಿಕ ಉತ್ತರಾಖಂಡ್‍ಗೆ ಇದು ಐದನೆ ವಿಧಾನಸಭಾ ಚುನಾವಣೆಯಾಗಿದೆ.
ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ರಾಜ್ಯಾಡಳಿತವು ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸಿದೆ.
ರಾಜ್ಯದಲ್ಲಿ ಎರಡನೆ ಬಾರಿ ಅಧಿಕಾರಕ್ಕೆ ಮರಳಲು ಬಿಜೆಪಿ ಬಯಸುತ್ತಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಸೋಲು ಕಂಡಿದ್ದ ಕಾಂಗ್ರೆಸ್ ಕೂಡ ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಚಿತ್ತ ನೆಟ್ಟಿದೆ. ಈ ಬಾರಿ ಆಮ್ ಆದ್ಮಿ ಪಕ್ಷ ಸಹ ಅಖಾಡಕ್ಕಿಳಿದಿದೆ. ಕರ್ನಲ್ ಅಜಯ್ ಕೊಥಿಯಾಲ್ ಅವರನ್ನು ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಒಟ್ಟು 81,72,173 ಮತದಾರರು 632 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಈ ಪೈಕಿ 152 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದಾರೆ.
36,095 ಪೊಲೀಸ್, ಕೇಂದ್ರ ಅರೆಸೇನಾ ಪಡೆ ಮತ್ತು ಪಿಎಸಿ ಸಿಬ್ಬಂದಿಯನ್ನು ರಾಜ್ಯಾದ್ಯಂತ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
8624 ಸ್ಥಳಗಳಲ್ಲಿನ 11,697 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸೌಜನ್ಯ ಅವರು ತಿಳಿಸಿದರು.
ಗೋವಾದಲ್ಲೂ ಏಕಹಂತದ ಮತದಾನ
ಪಣಜಿ ವರದಿ: ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಏಕಹಂತದ ಬಿರುಸಿನ ಮತದಾನ ನಡೆಯಿತು. 40 ಕ್ಷೇತ್ರಗಳಲ್ಲಿ ಒಟ್ಟು 301 ಅಭ್ಯರ್ಥಿಗಳು ಸ್ರ್ಪಧಿಸಿದ್ದಾರೆ. ಕರಾವಳಿ ರಾಜ್ಯ ಗೋವಾದಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.
11 ಲಕ್ಷಕ್ಕೂ ಅಧಿಕ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 9590 ದಿವ್ಯಾಂಗರು, 80 ವರ್ಷಕ್ಕೂ ಮೇಲ್ಪಟ್ಟ 2997 ಜನರು, 47 ಲೈಂಗಿಕ ಕಾರ್ಯಕರ್ತೆಯರು ಮತ್ತು 9 ತೃತೀಯ ಲಿಂಗಿಗಳು ಸೇರಿದ್ದಾರೆ. ಮತ ಎಣಿಕೆ ಮಾರ್ಚ್ 10ರಂದು ನಡೆಯಲಿದೆ. ಗೋವಾದಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿಜೆಪಿ, ಕಾಂಗ್ರೆಸ್, ಎನ್‍ಸಿಪಿ ಮತ್ತು ಕೆಲವು ಚಿಕ್ಕ ಪಕ್ಷಗಳು ಸೇರಿದಂತೆ ಈ ಬಾರಿ ಬಹುಕೋನ ಸ್ಪರ್ಧೆ ಏರ್ಪಟ್ಟಿದೆ.
ಮುಖ್ಯಮಂತ್ರಿ ಪ್ರಮೋಚ್ ಸಾವಂತ್ (ಬಿಜೆಪಿ), ಪ್ರತಿಪಕ್ಷ ನಾಯಕ ದಿಗಂಬರ ಕಾಮತ್ (ಕಾಂಗ್ರೆಸ್), ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲೆಮೋ (ಟಿಎಂಸಿ), ರವಿನಾಯಕ್ (ಬಿಜೆಪಿ), ಲಕ್ಷ್ಮಿಕಾಂತ್ ಪರ್ಯೇಕರ್ (ಪಕ್ಷೇತರ), ಮಾಜಿ ಉಪಮುಖ್ಯಮಂತ್ರಿಗಳಾದ ವಿಜಯ್ ಸರ್ದೇಸಾಯಿ (ಜಿಎಫ್‍ಪಿ), ಸುದಿನ್ ಧವಳೀಕರ್ (ಎಂಜಿಪಿ), ದಿ.ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ಪುತ್ರ ಉತ್ಪಲ್ ಪಾರಿಕ್ಕರ್, ಆಪ್‍ನ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

Articles You Might Like

Share This Article