ವಿಧಾನಸಭೆಯಲ್ಲಿ ಗರಂ ಆದ ಸ್ಪೀಕರ್

Social Share

ಬೆಂಗಳೂರು,ಸೆ.14- ಎಸ್ಟಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ಚರ್ಚೆಗೆ ಅವಕಾಶ ಕೊಡಬೇಕೆಂದು ಶಾಸಕರು ಸಭಾಧ್ಯಕ್ಷರಿಗೆ ಒತ್ತಡ ಹಾಕಿದ್ದರಿಂದ, ವಿಶ್ವೇಶ್ವರಹೆಗಡೆ ಕಾಗೇರಿ ಅವರು ತಾಳ್ಮೆ ಕಳೆದುಕೊಂಡು ಗದರಿಸಿದ ಪ್ರಸಂಗ ನಡೆಯಿತು.

ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಎದ್ದು ನಿಂತು ಎಸ್ಟಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂದು ಶ್ರೀಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ ಇದೊಂದು ಗಂಭೀರ ವಿಚಾರವಾಗಿರುವುದರಿಂದ ಚರ್ಚೆಗೆ ಅವಕಾಶ ಕೊಡಬೇಕೆಂದು ಪಟ್ಟು ಹಿಡಿದರು.

ಇದನ್ನೂ ಓದಿ : ಮೈಸೂರು ಅರಮನೆಯಲ್ಲಿ ಗಂಡು ಮರಿಗೆ ನೀಡಿದ ಲಕ್ಷ್ಮಿ

ಇದಕ್ಕೆ ಕಾಂಗ್ರೆಸ್ ಕೆಲ ಶಾಸಕರು ದನಿಗೂಡಿಸಿ ಸಭಾಧ್ಯಕ್ಷರೆ ಇದೊಂದು ಸೂಕ್ಷ್ಮ ವಿಷಯ. ಸದನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಸರ್ಕಾರ ಉತ್ತರ ಕೊಡಬೇಕು. ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ನೀವು ನೋಟಿಸ್ ಕೊಟ್ಟಿಲ್ಲ. ನನ್ನ ಗಮನಕ್ಕೂ ತಂದಿಲ್ಲ. ಏಕಾಏಕಿ ಚರ್ಚೆ ಮಾಡುತ್ತೇನೆ ಎಂದರೆ ಹೇಗೆ? ಇದೇನೊ ಸದನವೋ ಜಾತ್ರೆಯೋ? ಎಂದು ಸಭಾಧ್ಯಕ್ಷರು ತರಾಟೆಗೆ ತೆಗೆದುಕೊಂಡರು.

ಸದನವನ್ನು ನಿಯಮಾವಳಿ ಪ್ರಕಾರ ನಡೆಸಬೇಕು. ಕನಿಷ್ಟ ಇಂತಹ ವಿಷಯಗಳನ್ನು ನೋಟಿಸ್ ಕೊಡುವ ಸೌಜನ್ಯವಿಲ್ಲವೆಂದರೆ ಹೇಗೆ? ಏಕಾಏಕಿ ಕೊಡಲು ಸಾಧ್ಯವಿಲ್ಲ. ವಿಷಯದ ಸೂಕ್ಷ್ಮತೆ ಇದ್ದರೆ ನನ್ನ ಗಮನಕ್ಕೆ ತರಬಹುದಿತ್ತಲ್ಲವೇ ಎಂದು ಅಸಮಧಾನ ಹೊರಹಾಕಿದರು.

ಸದಸ್ಯರು ಗದ್ದಲವನ್ನು ಮುಂದುವರೆಸಿದಾಗ ಕುಪಿತರಾದ ಸಭಾಧ್ಯಕ್ಷರು ಶಾಸಕರಾಗಿ ನಾಲ್ಕೂವರೆ ವರ್ಷವಾಗಿದೆ ಒಂದು ನೋಟಿಸ್ ಕೊಡದೆ ಚರ್ಚೆಗೆ ಅವಕಾಶ ಕೊಡಬೇಕೆಂದು ಒತ್ತಡ ತರುವುದು ಶೋಭೆ ತರುವುದಿಲ್ಲ. ಕಡೆಪಕ್ಷ ನಿಮ್ಮ ನಾಯಕರಾದರೂ ನಿಮಗೆ ಬುದ್ದಿ ಹೇಳಬೇಕು. ಇದು ಸದನ ನಾನು ನಿಯಮಾವಳಿ ಪ್ರಕಾರವೇ ನಡೆಸುತ್ತೇನೆ ಎಂದು ಆಕ್ರೋಶಗೊಂಡರು.

ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ 200 ಕೋಟಿ ರೂ. ಡ್ರಗ್ಸ್ ವಶ, 6 ಪಾಕ್ ಪ್ರಜೆಗಳ ಬಂಧನ

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಇದು ಸೂಕ್ಷ್ಮವಾದ ವಿಷಯ. ಎಸ್ಟಿ ಸಮುದಾಯದ ಸ್ವಾಮೀಜಿಗಳು ತಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಕಳೆದ 208 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸ್ವತಃ ನಾನೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದೇನೆ. ವಿಷಯ ಗಂಭೀರವಾಗಿರುವುದರಿಂದ ಚರ್ಚೆಗೆ ಕೊಡಿ. ಸಭಾಧ್ಯಕ್ಷರಾಗಿ ನೀವು ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಸಲಹೆ ಮಾಡಿದರು. ಆಗ ಸಭಾಧ್ಯಕ್ಷರು, ನಾನು ತಾಳ್ಮೆ ಕಳೆದುಕೊಂಡಿಲ್ಲ.

ಬಹಳ ಸಹನೆಯಿಂದ ಸದನ ನಡೆಸುತ್ತಿದ್ದೇನೆ. ನೋಟಿಸ್ ನೀಡದೇ ವಿಷಯ ಚರ್ಚೆಗೆ ಅವಕಾಶ ಕೇಳಿದ್ದಾರೆ ಶಾಸಕರಾಗಿ ನಾಲ್ಕುವರೆ ವರ್ಷವಾಗಿದೆ. ಒಂದು ನೋಟಿಸ್ ಕೊಡದೆ ವಿಷಯ ಹೇಗೆ ಚರ್ಚೆ ಮಾಡಬೇಕು ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಸದನವನ್ನು ನಿಯಮಾವಳಿ ಪ್ರಕಾರ ನಡೆಸಬೇಕು. ಸದಸ್ಯರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

Articles You Might Like

Share This Article