ಹಕ್ಕುಚ್ಯುತಿ ವಿಚಾರ : ವಿಧಾನಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ವಾಗ್ವಾದ

ಬೆಂಗಳೂರು,ಮಾ.12- ಹಕ್ಕುಚ್ಯುತಿ ಕುರಿತ ವಿಚಾರದ ಪ್ರಸ್ತಾಪದ ಸಂದರ್ಭದಲ್ಲಿ ಪದೇ ಪದೇ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ವಾಗ್ವಾದ ನಡೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹಕ್ಕುಚ್ಯುತಿ ಪ್ರಸ್ತಾಪವನ್ನು ಮಾಡುತ್ತಾ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡುವಾಗ, ಸಭಾಧ್ಯಕ್ಷರ ಪೀಠವನ್ನು ಉದ್ದೇಶಿಸಿ ಆಕ್ಷೇಪಾರ್ಹ ಪದ ಬಳಸಿದ್ದಾರೆ.

ಸುಪ್ರೀಂಕೋರ್ಟ್‍ನ ತೀರ್ಪನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂದು ಹೇಳಿದಾಗ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ತಾವು ಸುಪ್ರೀಂಕೋರ್ಟ್‍ನ ತೀರ್ಪನ್ನಷ್ಟೇ ಉಲ್ಲೇಖಿಸಿದ್ದೇನೆ. ಉಲ್ಲೇಖಿಸಲು ಅವಕಾಶವಿಲ್ಲವೇ ಎಂದರು.  ಸುಧಾಕರ್ ಅವರು ಸಂವಿಧಾನ ಕುರಿತು ಮಾತನಾಡುವ ಸಂದರ್ಭದಲ್ಲಿ ಹೇಳಿರುವುದನ್ನು ಅಷ್ಟೇ ಉಲ್ಲೇಖಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಒಂದು ಹಂತದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಕ್ರಿಯಾಲೋಪವೆತ್ತಿ, ಹಕ್ಕುಚ್ಯುತಿ ವಿಚಾರಕ್ಕೆ ಸೀಮಿತವಾಗಿ ಮಾತನಾಡಬೇಕು. ಶಾಸಕರು ಭಾಷಣ ಪೂರ್ಣ ಮಾಡಲು ಅವಕಾಶ ನೀಡದಿರುವುದೇ ಹಕ್ಕುಚ್ಯುತಿಯಾಗಿದೆ ಎಂದರು.