ಪಾಲಕ್ಕಾಡ್(ಕೇರಳ ),ಅ.6- ಬಸ್‍ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿ, 40 ಮಂದಿ ಗಾಯಗೊಂಡಿರುವ ಘಟನೆ ವಡಕ್ಕೆಂಚೇರಿಯಲ್ಲಿ ನಡೆದಿದೆ.ಮಧ್ಯರಾತ್ರಿ ಖಾಸಗಿ ಪ್ರವಾಸಿ ಬಸ್ ಹಿಂದಿನಿಂದ ಸರ್ಕಾರಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಮೃತರಲ್ಲಿ ಐವರು ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಕೇರಳ ರಸ್ತೆ ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ. ಅತಿವೇಗವಾಗಿ ಬಂದ ಖಾಸಗಿ ಬಸ್, ಕಾರನ್ನು ಹಿಂದಿಕ್ಕುವ ಭರದಲ್ಲಿ ಮುಂದೆ ಹೋಗುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗೆ ಡಿಕ್ಕಿ ಹೊಡೆದಿದೆ.
ಖಾಸಗಿ ಬಸ್‍ನ ಅತಿವೇಗ ಮತ್ತು ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರಿಗೆ ಬಸ್ ಕೇರಳದ ಕೊಟ್ಟಾರಕ್ಕರದಿಂದ ತಮಿಳುನಾಡಿನ ಕೊಯಮತ್ತೂರಿಗೆ ತೆರಳುತ್ತಿದ್ದು ಅದರಲ್ಲಿ 81 ಪ್ರಯಾಣಿಕರಿದ್ದು, ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಖಾಸಗಿ ಬಸ್‍ನಲ್ಲಿ ಎರ್ನಾಕುಲಂನ ಬಸೆಲಿಯೋಸ್ ವಿದ್ಯಾನಿಕೇತನ ಹಿರಿಯ ಮಾಧ್ಯಮಿಕ ಶಾಲೆಯ 42ವಿದ್ಯಾರ್ಥಿಗಳು ಮತ್ತು 5 ಶಿಕ್ಷಕರು, ಪ್ರವಾಸ ಮುಗಿಸಿ ವಾಪಸಾಗುತ್ತಿದ್ದರು. ಇದರಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಇತರರು ಚೇತರಿಸಿಕೊಂಡಿದ್ದಾರೆ.
ಅಪಘಾತ ಹೇಗೆ ಮತ್ತು ಏಕೆ ಸಂಭವಿಸಿತು ಎಂಬುದನ್ನು ಪರಿಶೀಲಿಸಲು ತನಿಖೆ ನಡೆಸಲಾಗುವುದು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಚಿವ ಎಂ.ಬಿ.ರಾಜೇಶ್ ಹೇಳಿದ್ದಾರೆ.
ಅಪಘಾತದಲ್ಲಿ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಪರಿಗಣಿಸಲು ಇಂದಿನ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಈ ದುರಂತದಲ್ಲಿ ಆತ್ಮೀಯ ಸ್ನೇಹಿತರು ಮತ್ತು ಶಿಕ್ಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದರು.
ಬಸ್ ಪಲ್ಟಿಯಾದಾಗ ನಮಗೆ ಎಲ್ಲೆಂದರಲ್ಲಿ ರಕ್ತ ಹರಿಯುತ್ತಿತ್ತು, ಕೆಟ್ಟ ಸ್ಥಿತಿಯಲ್ಲಿದ್ದ ನಮ್ಮ ಕೆಲವು ಸ್ನೇಹಿತರು ಮತ್ತು ಶಿಕ್ಷಕರಿಗೆ ಏನಾಗಿದೆ ಎಂದು ನಮಗೆ ತಿಳಿದಿಲ್ಲ ಎಂದು ವಿದ್ಯಾರ್ಥಿಯೊಬ್ಬ ಮಾಧ್ಯಮಕ್ಕೆ ಕಂಬನಿ ಮಿಡಿಯುತ್ತಾ ಅಳಲು ತೋಡಿಕೊಂಡಿದ್ದು, ಬಸ್‍ನಲ್ಲಿ ಚಲನಚಿತ್ರ ನೋಡುತ್ತಿದ್ದಾಗ ಅಪಘಾತ ನಡೆಯಿತು. ಯಾರೋ ನನ್ನ ಮೇಲೆ ಬಿದ್ದರು ಎಂದು ಇನ್ನೊಬ್ಬ ವಿದ್ಯಾರ್ಥಿನಿ ಹೇಳಿದ್ದಾಳೆ.
ನನ್ನನು ಹೇಗೂ ಬಸ್‍ನಿಂದ ಹೊರಗೆಳೆದರು. ಆದರೆ ನನ್ನ ಹತ್ತಿರ ಕುಳಿತಿದ್ದ ಹುಡುಗಿಯನ್ನು ಹೊರತೆಗೆಯಲು ಹೆಚ್ಚು ಸಮಯ ಹಿಡಿಯಿತು ಎಂದು ಆಕೆ ಹೇಳಿದ್ದಾಳೆ. ವಡಕ್ಕೆಂಚೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.