ಎಟಿಎಂ ಹಣದೊಂದಿಗೆ ಪರಾರಿಯಾಗಿದ್ದ ಕಾರು ಚಾಲಕನ ಬಂಧನ

Social Share

ಬಾಗೇಪಲ್ಲಿ, ಸೆ.18- ಆಂಧ್ರಪ್ರದೇಶದ ಕಡಪ ನಗರದ ಎಸ್‍ಬಿಐ ಬ್ಯಾಂಕ್‍ನ ಎಟಿಎಂಗೆ ತುಂಬಬೇಕಾಗಿದ್ದ 56 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಸಿಎಂಸಿ ಕಂಪೆನಿ ಕಾರು ಚಾಲಕನನ್ನು ಬಾಗೇಪಲ್ಲಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ಯಾಂಕ್‍ನ ಎಟಿಎಂ ಯಂತ್ರಕ್ಕೆ ತುಂಬಲು 56 ಲಕ್ಷ ಹಣವನ್ನು ಸಿಎಂಸಿ ಕಂಪೆನಿ ವಾಹನದಲ್ಲಿ ಹಣ ಸಾಗಿಸುತ್ತಿದ್ದ ವೇಳೆ ಕಡಪ ಮೂಲದ ವಾಹನ ಚಾಲಕ ಫಾರೂಕ್ ಹಣವನ್ನು ಕದ್ದು ಖಾಸಗಿ ವಾಹನದಲ್ಲಿ ಪರಾರಿಯಾಗಿದ್ದ.

ಈ ಸಂಬಂಧ ಆಂಧ್ರ ಪ್ರದೇಶದ ಕಡಪ ನಗರ ಪೊಲೀಸರು ಸಾಮಾಜಿಕ ಜಾಲತಾಣದ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರ್ಯಪ್ರವೃತ್ತರಾದ ಬಾಗೇಪಲ್ಲಿ ಠಾಣೆ ಪೊಲೀಸರು ಟೋಲ್‍ಪ್ಲಾಜಾ ಬಳಿ ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಫಾರೂಕ್ ಸಿಕ್ಕಿಬಿದ್ದಿದ್ದಾನೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಮಾತನಾಡಿ, ಚಿಕ್ಕಬಳ್ಳಾಪುರ ಡಿವೈಎಸ್‍ಪಿ ವಿ.ಕೆ.ವಾಸುದೇವ್ ಅವರ ಸೂಚನೆಯಂತೆ ಬಾಗೇಪಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್. ನಾಗರಾಜು ಪಟ್ಟಣದ ಹೊರವಲಯದಲ್ಲಿರುವ ಟೋಲ್ ಪ್ಲಾಜಾ ಬಳಿ ನಾಕಾಬಂದಿ ಏರ್ಪಡಿಸಿ ಟಾಟಾ ಇಟಿಯಾಸ್ ವಾಹನವನ್ನು ತಡೆದು ನಿಲ್ಲಿಸುವಷ್ಟರಲ್ಲಿ ಆರೋಪಿ ಕಾರು ಚಾಲಕ ಫಾರೂಕ್ ವಾಹನ ನಿಲ್ಲಿಸಿ ಸ್ಥಳದಿಂದ ಪರಾರಿಯಾಗುತ್ತಾನೆ.

ವಾಹನವನ್ನು ಪರಿಶೀಲಿಸಿದಾಗ 53 ಲಕ್ಷದ 50 ಸಾವಿರ ನಗದು ಪತ್ತೆಯಾಗಿದ್ದು, ಉಳಿದ 2.50 ಲಕ್ಷ ರೂ.ಕಳವಾಗಿರುತ್ತದೆ. ಪತ್ತೆಯಾಗಿರುವ ಹಣವನ್ನು ಆಂಧ್ರ ಪ್ರದೇಶದ ಕಡಪ ನಗರದ ಪೊಲೀಸರಿಗೆ ಹಸ್ತಾಂತರಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗ ಎಎಸ್‍ಐ ರಾಮನಾಥರೆಡ್ಡಿ, ಪೇದೆಗಳಾದ ಅರುಣï, ಅಶೋಕ್, ಸಾಗರ್, ವಿನಾಯಕ ಮತ್ತಿತರರು ಇದ್ದರು.

Articles You Might Like

Share This Article