ಎಟಿಎಂ ಬಳಿ ಸೆಕ್ಯೂರಿಟಿಯಂತೆ ನಿಂತು ಅಮಾಯಕ ದಂಪತಿಯ 50,000 ದರೋಡೆ..!

Social Share

ಬೆಂಗಳೂರು,ಫೆ.11- ಸೆಕ್ಯೂರಿಟಿ ಗಾರ್ಡ್‍ನಂತೆ ವೇಷ ಧರಿಸಿ ಎಟಿಎಂ ಬಳಿ ಬಂದ ವಂಚಕ ಅಮಾಯಕ ದಂಪತಿಯ ಗಮನ ಬೇರೆಡೆ ಸೆಳೆದು 50 ಸಾವಿರ ಹಣದೊಂದಿಗೆ ಪರಾರಿಯಾಗಿರುವ ಘಟನೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಫೆ.2ರಂದು ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಗ್ರಾಮದ ಮಹದೇವಯ್ಯ ಎಂಬುವರು ಪತ್ನಿ ಜೊತೆ 50 ಸಾವಿರ ಹಣವನ್ನು ಮಗ ಹೇಮಂತ್ ಗೌಡನ ಅಕೌಂಟ್‍ಗೆ ಹಾಕಲು ಮದ್ದೂರು ಟೌನ್, ಕೆನರಾ ಬ್ಯಾಂಕ್‍ಗೆ ಬಂದಿದ್ದಾರೆ.
ಬ್ಯಾಂಕ್‍ನಲ್ಲಿ ಜನ ಜಂಗುಳಿ ಇದ್ದ ಕಾರಣ ಸಿಬ್ಬಂದಿ ಎಟಿಎಂನಲ್ಲಿ ಹಣ ಹಾಕುವಂತೆ ತಿಳಿಸಿದ್ದಾರೆ. ಅದೇ ಸಮಯದಲ್ಲಿ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್‍ನಂತೆ ಬಟ್ಟೆ ಧರಿಸಿಕೊಂಡು ಗೇಟಿನ ಬಳಿ ಬಂದ ಅಪರಿಚಿತ ವ್ಯಕ್ತಿ ಮಹದೇವಯ್ಯ ಅವರನ್ನು ಅಣ್ಣಾ ಎಂದು ಮಾತನಾಡಿಸಿ ಬನ್ನಿ ನಿಮ್ಮ ಹಣವನ್ನು ಎಟಿಎಂನಲ್ಲಿ ಡಿಪಾಸಿಟ್ ಮಾಡಿಕೊಡುತ್ತೇನೆ ಎಂದು ಹೇಳಿದ್ದಾನೆ.
ಆತನ ಮಾತನ್ನು ನಂಬಿದ ಮಹದೇವಯ್ಯ ಅವರು 50 ಸಾವಿರ ಕೊಟ್ಟಿದ್ದಾರೆ. ಎಟಿಎಂನಲ್ಲಿ ಹಣ ಡಿಪಾಸಿಟ್ ಮಾಡುವನಂತೆ ನಾಟಕವಾಡಿ ನಂತರ ಹಣ ಅಕೌಂಟಿಗೆ ಹೋಗುತ್ತಿಲ್ಲ, ಬ್ಯಾಂಕ್‍ನಲ್ಲಿ ಕೇಳಿಕೊಂಡು ಬನ್ನಿ ಎಂದು ಮಹದೇವಯ್ಯ ಗಮನ ಸೆಳೆದಿದ್ದಾನೆ. ಮಹದೇವಯ್ಯ ದಂಪತಿ ಬ್ಯಾಂಕ್ ಒಳಗೆ ಹೋಗಲು ಮುಂದಾಗುತ್ತಿದ್ದಂತೆ ಇತ್ತ 50 ಸಾವಿರ ಹಣವನ್ನು ಜೇಬಿನಲ್ಲಿಟ್ಟುಕೊಂಡು ಮತ್ತೆ ಮಹದೇವಯ್ಯ ಅವರನ್ನು ಕರೆದು ಹಣ ಜಮಾ ಆಗಿದೆ ಎಂದು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಹಣ ಮಗನ ಅಕೌಂಟ್‍ಗೆ ಹೋಗಿಲ್ಲ ಎಂಬುದು ತಿಳಿದು ಗಾಬರಿಯಾದ ಮಹದೇವಯ್ಯ ಅವರು ನಿನ್ನೆ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮದ್ದೂರ್‍ನಲ್ಲಿ ಬ್ಯಾಂಕ್‍ಗಳಲ್ಲಿ ಸೆಕ್ಯೂರಿಟಿ ಗಾರ್ಡ್‍ಗಳು ಇಲ್ಲದ ಕಾರಣ ಮತ್ತು ಬ್ಯಾಂಕ್ ಅಕಾರಿಗಳ ಬೇಜವಾಬ್ದಾರಿತನದಿಂದ ಈ ರೀತಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಮಹಿಳೆಯರು, ಬಡವರು, ವೃದ್ಧರು ಕೂಡಿ ಇಟ್ಟ ಹಣಕ್ಕೆ ಮತ್ತು ಗ್ರಾಹಕರ ಹಣಕ್ಕೆ ಬ್ಯಾಂಕ್ ಮೇಲೆ ನಂಬಿಕೆ ಕಮ್ಮಿಯಾಗುತ್ತಿದೆ.
ಸಂಬಂಧಪಟ್ಟ ಬ್ಯಾಂಕ್ ರೀಜಿನಲ್ ಆಫೀಸ್ ಅಧಿಕಾರಿಗಳು ಇದರ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಿ ಎಲ್ಲಾ ಬ್ಯಾಂಕ್‍ಗೆ ಸೂಕ್ತ ಸೆಕ್ಯೂರಿಟಿಗಳನ್ನು ನಿಯೋಜಿಸಬೇಕು ಮತ್ತು ಬ್ಯಾಂಕ್‍ನ ವ್ಯವಹಾರಗಳು ತಿಳಿಯದ ಗ್ರಾಹಕರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Articles You Might Like

Share This Article