ಬಾಡಿಗೆಗೆ ಕಾರುಗಳನ್ನು ಅಟ್ಯಾಚ್ ಮಾಡಿಸಿಕೊಂಡು ಅಂತರಾಜ್ಯಗಳಿಗೆ ಮಾರುತ್ತಿದ್ದ ವಂಚಕರು ಅಂದರ್

Social Share

ಬೆಂಗಳೂರು, ಜ.8- ಟ್ರಾವೆಲ್ಸ್ ಹೆಸರಲ್ಲಿ ಮಾಲೀಕರಿಂದ ಕಾರುಗಳನ್ನು ಬಾಡಿಗೆಗೆಂದು ಅಟ್ಯಾಚ್ ಮಾಡಿಸಿಕೊಂಡು ಅಂತರ್‍ರಾಜ್ಯಗಳಿಗೆ ಮಾರಾಟ ಮಾಡಿದ್ದ ನಾಲ್ವರು ವಂಚಕರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ 67 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗವಾರದ ನಿವಾಸಿ ಶಿವಕುಮಾರ್ ಹಾಗೂ ಸಹಚರರಾದ ಹಾಸನ ಮೂಲದ ಕೃಷ್ಣೇಗೌಡ, ಶ್ರೀಕಾಂತ್ ಮತ್ತು ಗೋರಿಪಾಳ್ಯದ ಅಪ್ಸರ್ ಬಂಧಿತ ವಂಚಕರು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಐದು ಮಂದಿ ತಲೆಮರೆಸಿಕೊಂಡಿದ್ದು, ಅವರ ಶೋಧಕಾರ್ಯ ಮುಂದುವರೆದಿದೆ. ಅಲ್ಲದೆ, ಉಳಿದ 20 ಕಾರುಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬಾಗಲಗುಂಟೆಯಲ್ಲಿ ಪ್ರಮುಖ ಆರೋಪಿ ಶಿವಕುಮಾರ್ ಆರ್‍ಎಸ್ ಟೂರ್ಸ್ ಮತ್ತು ಟ್ರಾವೆಲ್ಸ್ ಎಂಬ ಏಜೆನ್ಸಿ ನಡೆಸುತ್ತಿದ್ದನು. ತಮ್ಮ ಟ್ರಾವೆಲ್ಸ್‍ಗೆ ಕಾರುಗಳನ್ನು ಅಟ್ಯಾಚ್ ಮಾಡಿಸಿದರೆ ತಿಂಗಳಿಗೆ 15 ಸಾವಿರ ರೂ. ಬಾಡಿಗೆ ಕೊಡುವುದಾಗಿ ನಂಬಿಸಿದ್ದಾನೆ.
ಕಾರು ಮಾಲೀಕರುಗಳಿಂದ ಕಾರುಗಳನ್ನು ಹಂತ ಹಂತವಾಗಿ ಅಟ್ಯಾಚ್ ಮಾಡಿಸಿಕೊಂಡು ತಿಂಗಳಿಗೆ 15 ಸಾವಿರ ಬಾಡಿಗೆ ನೀಡುವುದಾಗಿ ಮಾಲೀಕರ ಹತ್ತಿರ ಒಪ್ಪಂದ ಮಾಡಿಕೊಂಡು ಬಾಡಿಗೆಗೆ ಬಿಟ್ಟಿದ್ದನು. ಮೊದಮೊದಲು ಒಪ್ಪಂದದಂತೆ ಬಾಡಿಗೆ ಹಣವನ್ನು ನೀಡುತ್ತಿದ್ದನು. ತದನಂತರ ನವೆಂಬರ್ ತಿಂಗಳಲ್ಲಿ ಟ್ರಾವೆಲ್ಸ್ ಮಾಲೀಕ ಸಂಪರ್ಕಕ್ಕೆ ಸಿಗದೆ ಮೊಬೈಲ್ ನಂಬರ್‍ಗಳನ್ನು ಸ್ವಿಚ್‍ಆಫ್ ಮಾಡಿಕೊಂಡಿದ್ದಾರೆ.
ಟ್ರಾವೆಲ್ಸ್ ಕಾರುಗಳನ್ನು ಬಿಟ್ಟಿದ್ದ ಮಾಲೀಕರು ಕಂಗಾಲಾದರು. ಬಾಡಿಗೆ ಹಣ ಮತ್ತು ಕಾರನ್ನು ವಾಪಸ್ ಕೊಡದೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುವುದು ಅರಿತು ತಕ್ಷಣ ಮಾಲೀಕರು ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು.
ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೆÇಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ನಾಲ್ವರನ್ನು ಬಂಸಿ 67 ಕಾರುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಶಿವಕುಮಾರ್ ಟ್ರಾವೆಲ್ಸ್‍ಗೆ ಅಟ್ಯಾಚ್ ಮಾಡಿಸಿಕೊಂಡ ಕಾರುಗಳನ್ನು ಎರಡನೆ ಆರೋಪಿ ಮುಖಾಂತರ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಮುಂಬೈಗಳಲ್ಲಿ ಮಾರಾಟ ಮಾಡಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಟ್ರಾವೆಲ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಕಾಂತ್ ಮತ್ತು ಅಪ್ಸರ್‍ಗೆ ಕಾರುಗಳ ಮಾಲೀಕರಿಗೆ ಮೋಸ ಮಾಡುತ್ತಿದ್ದ ವಿಚಾರ ಗೊತ್ತಿದ್ದರೂ ಸಹ ತಮ್ಮ ಪರಿಚಯವಿರುವವರುಗಳ ಕಾರುಗಳನ್ನು ಬಾಡಿಗೆಗೆ ಅಟ್ಯಾಚ್ ಮಾಡಿಸಿ ಮಾಲೀಕರಿಂದ ಕಮಿಷನ್ ಪಡೆಯುತ್ತಿದ್ದುದು ಪೆÇಲೀಸರ ವಿಚಾರಣೆಯಿಂದ ಗೊತ್ತಾಗಿದೆ.
ಈ ಪ್ರಕರಣದಲ್ಲಿ ಉಳಿದ ಆರೋಪಿಗಳು ಹಾಗೂ ಕಾರುಗಳ ಪತ್ತೆಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯನ್ನು ಯಶವಂತಪುರ ಉಪವಿಭಾಗದ ಎಸಿಪಿ ಅರುಣ್ ನಾಗೇಗೌಡ, ಇನ್‍ಸ್ಪೆಕ್ಟರ್ ಸುನೀಲ್, ಸಬ್‍ಇನ್ಸ್‍ಪೆಕ್ಟರ್ ಶ್ರೀಕಂಠೇಗೌಡ ಮತ್ತು ಸಿಬ್ಬಂದಿ ಕೈಗೊಂಡು ವಂಚಕರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Articles You Might Like

Share This Article