ನನ್ನ ಮೇಲಿನ ದಾಳಿ ಸರ್ಕಾರಿ ಪ್ರಾಯೋಜಿತ : ಕಿರಿಟ್ ಸೋಮಯ್ಯ

ಮುಂಬೈ, ಏ.24- ತಮ್ಮ ಕಾರಿನ ಮೇಲೆ ಶಿವಸೇನೆ ಬೆಂಬಲಿಗರು ಪಾದರಕ್ಷೆಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದಿರುವ ಪ್ರಕರಣ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರದ ಪ್ರಾಯೋಜಿತ ಎಂದು ಬಿಜೆಪಿಯ ಮಾಜಿ ಸಂಸದ ಕಿರಿಟ್ ಸೋಮಯ್ಯ ಆರೋಪಿಸಿದ್ದಾರೆ. ಬಂಧಿತ ಸ್ವತಂತ್ರ ಸಂಸದ ನವನೀತ್ ರಾಣಾ ಮತ್ತು ಅವರ ಶಾಸಕ ಪತಿ ರವಿ ರಾಣಾ ಅವರನ್ನು ಭೇಟಿ ಮಾಡಲು ಸೋಮಯ್ಯ ಅವರು ಶನಿವಾರ ರಾತ್ರಿ ಮುಂಬೈನ ಖಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಕಿರಿಟ್ ಸೋಮಯ್ಯರ ಕಾರಿನ ಮೇಲೆ ದಾಳಿಯಾಗಿತ್ತು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಯ್ಯ, ನನ್ನ ಮೇಲಿನ ದಾಳಿಯನ್ನು ಉದ್ಧವ್ ಠಾಕ್ರೆ ಸರ್ಕಾರ ಪ್ರಾಯೋಜಿಸಿತ್ತು. ನಾನು ಖಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಸುಮಾರು 70-80 ಶಿವಸೇನೆ ಕಾರ್ಯಕರ್ತರು ಗೇಟ್ ಬಳಿ ಜಮಾಯಿಸಿದ್ದರು. ಶಿವಸೇನೆ ಗೂಂಡಾಗಳು ನನ್ನ ಮೇಲೆ ದಾಳಿ ಮಾಡಬಹುದೆಂದು ನಾನು ವೈಯಕ್ತಿಕವಾಗಿ ಪೊಲೀಸರಿಗೆ ತಿಳಿಸಿದ್ದೆ. ಅದರಂತೆ ದಾಳಿಯಾಗಿದೆ ಎಂದಿದ್ದಾರೆ.

ಈ ಮೊದಲು ಕಿರಿಟ್ ಸೋಮಯ್ಯ ವಿರುದ್ಧ ನೌಕೆ ಉಳುವಿಕೆ ಸಂಗ್ರಹಿಸಿದ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಅದನ್ನು ಸುಳ್ಳು ಎಫ್‍ಐಆರ್ ಎಂದು ಕಿರಿಟ್ ಸೋಮಯ್ಯ ಅಲ್ಲಗಳೆದಿದ್ದಾರೆ. ನನ್ನ ವಿರುದ್ಧ ಆಧಾರ ರಹಿತ ಎಫ್‍ಐಆರ್ ದಾಖಲಿಸಲಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಡಳಿತದಲ್ಲಿ ಮಾತ್ರ ಇಂತಹ ಸುಳ್ಳು ಎಫ್‍ಐಆರ್ ಅನ್ನು ದಾಖಲಿಸಬಹುದು. ಇದರ ಹಿಂದೆ ಮುಂಬೈ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಇದ್ದಾರೆ. ಕೂಡಲೇ ಪಾಂಡೆ ಅವರನ್ನು ಬದಲಾಯಿಸಬೇಕೆಂದು ಒತ್ತಾಯಿಸಿದರು.ತಮ್ಮ ಮೇಲಿನ ದಾಳಿಗೆ ಸಂಬಂಧಿಸಿದಂತೆ ನವದೆಹಲಿಗೆ ತೆರಳಿ ಕೇಂದ್ರ ಗೃಹ ಕಾರ್ಯದರ್ಶಿಯನ್ನು ಭೇಟಿ ಮಾಡಿ ದೂರು ನೀಡುವುದಾಗಿ ಹೇಳಿದ್ದಾರೆ.

ಹಿನ್ನೆಲೆ:
ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ಅಮರಾವತಿ ಸಂಸದ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರನ್ನು ಬಂಸಲಾಗಿತ್ತು. ಬಂತರನ್ನು ಬೆಂಬಲಿಸಲು ಸೋಮಯ್ಯ ತಡರಾತ್ರಿ ಖಾರ್ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ ಶಿವಸೇನೆ ಬೆಂಬಲಿಗರು ಸೋಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ, ಪೊಲೀಸ್ ಠಾಣೆಯಿಂದ ಹೊರಡುತ್ತಿದ್ದಾಗ ವಾಹನದ ಮೇಲೆ ಪಾದರಕ್ಷೆಗಳು ಮತ್ತು ನೀರಿನ ಬಾಟಲಿಗಳನ್ನು ಎಸೆದಿದೆ.

ಕಿರಿಟ್ ಸೋಮಯ್ಯ ಅವರ ಕಾರಿಗೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಭಾನುವಾರ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಪೊಲೀಸರು ದಾಖಲಿಸಿರುವ ಸೆಕ್ಷನ್‍ಗಳ ಬಗ್ಗೆ ತೃಪ್ತರಾಗದ ಕಾರಣ ಸೋಮಯ್ಯ ಎಫ್‍ಐಆರ್ ಪ್ರತಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ಅವರು ಅಧಿಕಾರಿ ತಿಳಿಸಿದ್ದಾರೆ.