ಆಡಿ ಕಾರು ಅಪಘಾತ : ಏಳು ಮಂದಿ ಒಟ್ಟಾಗಿ ಎಲ್ಲಿಗೆ ಹೋಗಿದ್ದರು..?

ಬೆಂಗಳೂರು, ಸೆ.1- ನಗರದಲ್ಲಿ ನಿನ್ನೆ ಮುಂಜಾನೆ ಸಂಭವಿಸಿದ ಆಡಿ ಕಾರು ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಸಿದಂತೆ ಸಂಚಾರಿ ವಿಭಾಗದ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈ ಏಳು ಮಂದಿ ಒಟ್ಟಾಗಿ ಕಾರಿನಲ್ಲಿ ಎಲ್ಲಿಗೆ ಹೋಗಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ತಮಿಳುನಾಡಿನ ಡೆಂಕಣಿಕೋಟೆಯಿಂದ ಮೊನ್ನೆ ಸಂಜೆ ಶಾಸಕರ ಪುತ್ರ ಕರುಣಾಸಾಗರ್ ಕೋರಮಂಗಲಕ್ಕೆ ತನ್ನ ಆಡಿ ಕಾರಿನಲ್ಲಿ ಬಂದಿದ್ದಾನೆ. ನಂತರ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದು, ಯಾವ ಸ್ಥಳದಲ್ಲಿ ಎಲ್ಲರೂ ಒಟ್ಟಾಗಿ ಸೇರಿಕೊಂಡರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಏಳು ಮಂದಿ ಸೇರಿ ಮೊದಲು ಎಲ್ಲಿಗೆ ಹೋದರು, ಯಾವ ಸ್ಥಳದಲ್ಲಿ ರಾತ್ರಿ ಪಾರ್ಟಿ ಮಾಡಿದರು. ಪಾರ್ಟಿ ವೇಳೆ ಎಷ್ಟು ಹೊತ್ತು ಕಾಲ ಕಳೆದರು, ಎಷ್ಟೊತ್ತಿಗೆ ಅಲ್ಲಿಂದ ತೆರಳಿದರು, ಪಾರ್ಟಿ ಮುಗಿಸಿ ಎಲ್ಲಿಗೆ ಹೋಗುತ್ತಿದ್ದರು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಚಾರಿ ಪೊಲೀಸರು ಕೂಲಂಕಶವಾಗಿ ತನಿಖೆ ನಡೆಸುತ್ತಿದ್ದಾರೆ.

ಕೋರಮಂಗಲ ಮತ್ತು ಎಚ್‍ಎಸ್‍ಆರ್ ಲೇಔಟ್ ರಸ್ತೆಗಳಲ್ಲಿನ ಸಿಸಿಟಿವಿ ಫುಟೇಜ್‍ಗಳನ್ನು ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಅಪಘಾತದ ಬಗ್ಗೆ ಆಗ್ನೇಯ ಸಂಚಾರ ಉಪವಿಭಾಗದ ಎಸಿಪಿ ಅವರು ತನಿಖೆ ಮಾಡುತ್ತಿದ್ದಾರೆ.

ಅತಿ ವೇಗ ಹಾಗೂ ಚಾಲಕನ ನಿರ್ಲಕ್ಷ್ಯತೆಯಿಂದ ಈ ಅಪಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅಷ್ಟೊತ್ತಿನಲ್ಲಿ ಅವರೆಲ್ಲ ಕಾರಿನಲ್ಲಿ ಎಲ್ಲಿಗೆ ಹೋಗುತ್ತಿದ್ದರು, ಜಾಲಿರೈಡ್‍ಗಾಗಿಯೇ ಅತಿವೇಗವಾಗಿ ಚಾಲನೆ ಮಾಡಲಾಗುತ್ತಿತ್ತೇ ಎಂಬಿತ್ಯಾದಿ ಬಗ್ಗೆ ಪೊ ಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

# ಕರುಣಾಸಾಗರ್ ವಾಹನ ಚಾಲನೆ:
ಅಪಘಾತ ಸಂದರ್ಭದಲ್ಲಿ ಕರುಣಾಸಾಗರ್ ಆಡಿ ಕಾರನ್ನು ಚಾಲನೆ ಮಾಡುತ್ತಿದ್ದಾನೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕರುಣಾಸಾಗರ್ ಮದ್ಯ ಸೇವಿಸಿದ್ದನೇ ಎಂಬ ಬಗ್ಗೆ ಪೊ ಲೀಸರು ತನಿಖೆ ನಡೆಸುತ್ತಿದ್ದಾರೆ.

ಕರುಣಾಸಾಗರ್ ಅವರ ಮರಣೋತ್ತರ ಪರೀಕ್ಷೆ ವರದಿ ಹಾಗೂ ಘಟನಾ ಸ್ಥಳದಲ್ಲಿ ದೊರೆತ ರಕ್ತವನ್ನು ಎಫ್‍ಎಸ್‍ಎಲ್ ಅಕಾರಿಗಳು ಸಂಗ್ರಹಿಸಿದ್ದು, ಈ ಎರಡೂ ವರದಿಗಳು ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

# ಎಚ್ಚೆತ್ತುಕೊಳ್ಳಬೇಕಿತ್ತು:
ಸ್ನೇಹಿತರ ಜತೆ ಅತಿವೇಗವಾಗಿ ಕಾರು ಚಾಲನೆ ಮಾಡಿಕೊಂಡು ಮೊನ್ನೆ ರಾತ್ರಿ 10.30ರ ಸುಮಾರಿಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಕೋರಮಂಗಲದ ಅಪೊಲೋ ಆಸ್ಪತ್ರೆ ಬಳಿ ಸಂಚಾರಿ ಪೊಲೀಸರು ಗಮನಿಸಿ ಕಾರನ್ನು ತಡೆದು, ವಿಚಾರಿಸಿ ನಿಧಾನವಾಗಿ ಚಾಲನೆ ಮಾಡಿಕೊಂಡು ಹೋಗುವಂತೆ ಹೇಳಿದಾಗ ಕರುಣಾಸಾಗರ್ ಎಚ್ಚೆತ್ತುಕೊಂಡಿದ್ದರೆ ತನ್ನ ಪ್ರಾಣ ಹಾಗೂ ಸ್ನೇಹಿತರ ಪ್ರಾಣ ಉಳಿಸಬಹುದಿತ್ತು.

# ಧನುಷಾ ಮರಣೋತ್ತರ ಪರೀಕ್ಷೆ:
ಕಾರು ಅಪಘಾತದಲ್ಲಿ ಮೃತಪಟ್ಟಿರುವ ಕೇರಳ ಮೂಲದ ದಂತವೈದ್ಯೆ ಧನುಷಾ (29) ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಇಂದು ಸೆಂಟ್‍ಜಾನ್ ಆಸ್ಪತ್ರೆಯಲ್ಲಿ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ನಿನ್ನೆ ಆರು ಮಂದಿಯ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿತ್ತು. ಕೇರಳದಿಂದ ಧನುಷಾ ಪೋಷಕರು ಆಗಮಿಸಿದ ಹಿನ್ನೆಲೆಯಲ್ಲಿ ಇಂದು ಆಕೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Sri Raghav

Admin