ತುಮಕೂರು, ಜು.17- ರೈಲ್ವೆ ಅಂಡರ್ ಪಾಸ್‍ನಲ್ಲಿ ನಿಂತಿದ್ದ ನೀರಿನಲ್ಲಿ ವಿಡಿಯೋ ಮಾಡಲು ಹೋಗಿ ಕಾಲುಜಾರಿ ರಾಜಕಾಲುವೆಗೆ ಬಿದ್ದು ಆಟೋ ಚಾಲಕರೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ನಗರದ ಹೆಗಡೆ ಕಾಲೋನಿ ಸಮೀಪ ಸಂಭವಿಸಿದೆ.
ಶಾಂತಿನಗರ ನಿವಾಸಿ ಆಟೋ ಚಾಲಕ ಅಮ್ಜದ್ ಖಾನ್ (44) ನೀರಿನಲ್ಲಿ ಕೊಚ್ಚಿಕೊಂಡು ಹೋದವರಾಗಿದ್ದು, ಅವರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಆದರೆ, ಸುಳಿವು ಸಿಕ್ಕಿಲ್ಲ.
ಘಟನೆ ವಿವರ: ತುಮಕೂರು ನಗರದಲ್ಲಿ ಮಳೆ ಕಾರಣ ರೈಲ್ವೆ ಅಂಡರ್ ಪಾಸ್ ಕೆಳಗೆ ಮಳೆ ನೀರು ನಿಂತಿದ್ದು, ಈ ವೇಳೆ ಅಮ್ಜದ್ ಖಾನ್ ಆಟೋದಲ್ಲಿ ಬಂದು ಪಕ್ಕದ ಮೋರಿಯಲ್ಲಿ ಹರಿಯುತ್ತಿದ್ದ ನೀರನ್ನು ವಿಡಿಯೋ ಮಾಡಲು ಹೋಗಿದ್ದಾನೆ.
ಇದೇ ವೇಳೆ ಟಿಪ್ಪರ್ ಲಾರಿ ವೇಗವಾಗಿ ನುಗ್ಗಿಬಂದ ಕಾರಣ ನೀರು ಸಿಡಿದು ಆಯತಪ್ಪಿ ಅಮ್ಜದ್ ರಾಜಕಾಲುವೆಗೆ ಬಿದ್ದಿದ್ದು, ನೀರು ರಭಸವಾಗಿ ಹರಿಯುತ್ತಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾನೆ.
ಆಟೋ ಚಾಲಕ ಮೋರಿಯಲ್ಲಿ ಮುಳುಗಿದ ಜಾಗದಿಂದು ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿರುವ ಭೀಮಸಂದ್ರ ಗ್ರಾಮದಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕದವರೆಗೂ ಅಗ್ನಿಶಾಮಕದಳ ಸಿಬ್ಬಂದಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಶವ ಮಾತ್ರ ದೊರೆತಿಲ್ಲ. ಕತ್ತಲೆಯಾದ ಪರಿಣಾಮ ಶವ ಹುಡುಕಾಟದ ಕಾರ್ಯಾಚರಣೆ ಮುಂದೂಡಲಾಗಿತ್ತು. ಇಂದು ಬೆಳಗ್ಗೆ 7 ಗಂಟೆಯಿಂದ ಮೃತದೇಹದ ಹುಡುಕಾಟ ಪ್ರಾರಂಭವಾಗಿದೆ.
ಎನ್‍ಡಿಆರ್‍ಎಫ್ ತಂಡ ಆಗಮನ: ಬೆಂಗಳೂರಿನಿಂದ ಆಗಮಿಸಿರುವ ಎನ್‍ಡಿಆರ್‍ಎಫ್ ತಂಡ ರೈಲ್ವೆ ಅಂಡರ್ ಪಾಸ್‍ನಿಂದ ಬೆಳಗ್ಗೆ ಮೃತದೇಹದ ಹುಡುಕಾಟ ನಡೆಸಿದೆ. ರಾಜಗಾಲುವೆಯಲ್ಲಿ ನೀರಿನ ಹರಿವು ಜೋರಾಗಿರುವುದರಿಂದ ಮೃತದೇಹದ ಪತ್ತೆಗೆ ಅಡಚಣೆಯಾಗಿದ್ದು, ರಾಜಕಾಲುವೆಗೆ ಬರುತ್ತಿರುವ ನೀರನ್ನು ಪಕ್ಕದ ಬಯಲಿಗೆ ತಿರುಗಿಸುವ ನಿಟ್ಟಿನಲ್ಲಿ ಜೆಸಿಬಿ, ಹಿಟಾಚಿಗಳನ್ನು ತರಿಸಲಾಗಿದ್ದು, ನೀರು ತಿರುಗಿಸುವ ಸ್ಥಳಕ್ಕೆ ಹೋಗಲು ಕೆಸರು ಅಡ್ಡಿಯಾಗಿದ್ದು, ವಾಹನಗಳು ಹೂತುಕೊಳ್ಳುತ್ತಿವೆ.
ರಾಜಕಾಲುವೆ ಅಂತ್ಯದಲ್ಲಿ ಹೂಳು, ಜೊಂಡಿನ ಗಿಡಗಳು ಬೆಳೆದಿದ್ದು, ಮೃತದೇಹ ಇಲ್ಲಿಯೇ ಕೆಸರಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯ ಎನ್‍ಡಿಆರ್‍ಎಫ್ ತಂಡದ್ದಾಗಿದ್ದು, ರಾಜಕಾಲುವೆ ನೀರನ್ನು ತಿರುಗಿ, ನೀರಿನ ಹರಿವು ಕಡಿಮೆ ಮಾಡುವವರೆಗೆ ಮೃತದೇಹ ಪತ್ತೆ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಎಸ್‍ಪಿ ರಾಹುಲ್ ಕುಮಾರ್, ಪಾಲಿಕೆ ಆಯುಕ್ತೆ ರೇಣುಕಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.