ಓಲಾ, ಊಬರ್ ರದ್ದುಗೊಳಿಸಲು ಆಟೋ ಚಾಲಕರ ಆಗ್ರಹ

Social Share

ಬೆಂಗಳೂರು,ಅ.11- ಓಲಾ, ಉಬರ್, ರಾಪಿಡೋ ಸಂಸ್ಥೆಗಳಿಂದ ಆಟೋ ಚಾಲಕರ ಜೀವನಕ್ಕೆ ಕುತ್ತು ತಂದಿದ್ದು, ವಾರದೊಳ ಗಾಗಿ ಅನಧಿಕೃತ ಆ್ಯಪ್ಗಳನ್ನು ರದ್ದುಗೊಳಿಸಿ ಸರ್ಕಾರ ದಿಂದಲೇ ನೂತನ ಆ್ಯಪ್ ಜಾರಿಗೆ ತಂದು ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಬೆಂಗಳೂರು ಆಟೋ ಚಾಲಕರ ಸಂಘಸಂಸ್ಥೆ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅಧ್ಯಕ್ಷ ಎಮ್. ಮಂಜುನಾಥ್, ಸರ್ಕಾರ ಈ ಬಗ್ಗೆ ಗಮನಹರಿಸಿ ಜನಸ್ನೇಹಿ , ಚಾಲಕ ಸ್ನೇಹಿ ಆ್ಯಪ್ನ್ನು ಅಭಿವೃದ್ಧಿಪಡಿಸಿ ಸಹಕಾರಿ ತತ್ವದಡಿ ನಡೆಸಬೇಕು , ಇಲ್ಲದಿದ್ದಲ್ಲಿ ಒಕ್ಕೂಟದ ವತಿಯಿಂದ ಸಾರಿಗೆ ಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಅನಧಿಕೃತ ವೈಟ್ಬೋರ್ಡ್ ಬೈಕ್ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳ ಅಪ್ಲಿಕೇಷನ್ಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಸರ್ಕಾರವೇ ಜನಸ್ನೇಹಿ , ಚಾಲಕ ಸ್ನೇಹಿ ಆಪ್ ಅನ್ನು ಅಭಿವೃದ್ಧಿಪಡಿಸಿ ಸಹಕಾರಿ ತತ್ವದಡಿ ನಡೆಸಬೇಕು ಒತ್ತಾಯಿಸಿದರು.

ಸಾರ್ವಜನಿಕರು ಇನ್ನು ಮುಂದೆ ಈ ರೀತಿಯ ಅಪ್ಲಿಕೇಷನ್ಗಳನ್ನು ಉಪಯೋಗಿಸದಂತೆ ಸರ್ಕಾರ ಪ್ರಕಟಣೆ ಹೊರಡಿಸಬೇಕು ಎಂದು ಅವರು ಕೋರಿದರು. ಬೆಂಗಳೂರು ನಗರದಲ್ಲಿ ಕಳೆದ 6 ದಶಕಗಳಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಆಟೋರಿಕ್ಷಾಗಳು ಹಾಗೂ ಇತ್ತೀಚಿನ 7-8 ವರ್ಷಗಳಿಂದ ಟ್ಯಾಕ್ಸಿಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಪ್ರಸ್ತುತ ಜಾಗತೀಕರಣ , ಡಿಜಿಟಲೀಕರಣ , ವಿದೇಶಿ ನೇರ ಬಂಡವಾಳದ ಆಕರ್ಷಣೆ ಮತ್ತು ಹೊಸ ಬದಲಾವಣೆಯಿಂದಾಗಿ ಸಾರಿಗೆ ಕ್ಷೇತ್ರದಲ್ಲಿ ಹಲವಾರು ಮಹತ್ತರವಾದ ಬದಲಾವಣೆಗಳು ಬಂದಿವೆ.

ಅದರಲ್ಲಿ ಮುಖ್ಯವಾಗಿ ಆಪ್ ಆಧಾರಿತ ಸಾರಿಗೆ ವ್ಯವಸ್ಥೆ ನೀಡುವ ಕಂಪನಿಗಳು ಪ್ರಮುಖವಾಗಿ ಓಲಾ , ಉಬೆರ್ , ಫ್ಯಾಪಿಡೋ, ಇತ್ಯಾದಿಗಳು ಇವುಗಳು ಹೊಸದಾಗಿ ಸಾರಿಗೆ ಕ್ಷೇತ್ರಕ್ಕೆ ಬಂದಾಗ ಯದ್ವಾ ತದ್ವಾ ಹಾಗೂ ಪ್ರಯಾಣಗಳನ್ನು ಪ್ರಯಾಣಿಕರಿಗೆ ಹಾಗೂ ಇನ್ಸೆಂಟಿವ್ ಹೆಸರಿನಲ್ಲಿ ಚಾಲಕರಿಗೆ ಅನೇಕ ಆಫರ್ಗಳ ಆಮಿಷಗಳನ್ನೊಡ್ಡಿ ಒಟ್ಟಾರೆ ಸಾರಿಗೆ ವ್ಯವಸ್ಥೆಯಲ್ಲಿ ಸಾರಿಗೆ ಇಲಾಖೆ ಮತ್ತು ಸರ್ಕಾರದ ಹಿಡಿತ ಇಲ್ಲದಿರುವ ಹಾಗೆ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡುವಿದವು ಎಂದು ದೂರಿದರು.

ಈ ಆಪ್ ಆಧಾರಿತ ಕಂಪನಿಗಳು, ಇದರ ಬಗ್ಗೆ ಸಾರಿಗೆ ಇಲಾಖೆಯು ಹಲವಾರು ಸಂಘ ಸಂಸ್ಥೆಗಳ ಮತ್ತು ಪತ್ರಿಕೆಗಳ ಹಾಗೂ ಮಾಧ್ಯಮಗಳ ವರದಿಯನ್ನು ಗಮನಿಸಿ ಎಚ್ಚೆತ್ತುಕೊಂಡು ಸರ್ಕಾರದ ಘನತೆ ಕಾಪಾಡಿಕೊಳ್ಳಲು 2016ರಲ್ಲಿ ಕರ್ನಾಟಕ ಆನ್ – ಡಿಮ್ಯಾಂಡ್ ಟ್ರಾನ್ಸ್ರ್ಟೇಷನ್ ಟೆಕ್ನಾಲಜಿ ಅಗ್ರಿಗೇಟರ್ ನಿಯಮಾವಳಿ 2016 ನಿಬಂಧನೆಗಳ ಪ್ರಕಾರ ಟ್ಯಾಕ್ಸಿ ಸೇವೆಗಳನ್ನು ಮಾತ್ರ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.

ಆದರೆ ಕಳೆದ 7-8 ವರ್ಷಗಳಿಂದ ನಿಯಮ ಬಾಹಿರವಾಗಿ ಆಟೋರಿಕ್ಷಾಗಳನ್ನು ತಮ್ಮ ಸಂಸ್ಥೆಗೆ ಪಾರ್ಟನರ್ ಎಂಬ ಕರಾರು ಒಪ್ಪಂದ ಮಾಡಿಕೊಂಡು ಆಟೋರಿಕ್ಷಾ ಚಾಲಕರಿಗೆ ಇಲ್ಲಸಲ್ಲದ ಆಮಿಷಗಳನ್ನೊಡ್ಡಿ , ಸಂಸ್ಥೆಗಳು ತಮ್ಮ ಇಚ್ಛಾನುಸಾರ ಪ್ರಯಾಣಿಕರ ಅವಶ್ಯಕತೆ ಮತ್ತು ಸಮಯವನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಸಂಘ ಸಂಸ್ಥೆಗಳು ನೂರಾರು ಮನವಿಗಳನ್ನು ಸಲ್ಲಿಸಿ ಹೋರಾಟ ಮಾಡಿದರೂ ತಲೆಕೆಡಿಸಿಕೊಳ್ಳದ ಸಾರಿಗೆ ಇಲಾಖೆ , ಈಗ ಸಂಸದರೊಬ್ಬರು ಮುಖ್ಯಮಂತ್ರಿಗಳಿಗೆ ಬರೆದ ಆಪ್ ಆಧಾರಿತ ಅಗ್ರಿಗೇಟರ್ ಸಂಸ್ಥೆಗಳಿಂದ ಆಟೋ ಪ್ರಯಾಣದ ಮಿನಿಮಮ್ 100 ರೂ. ವಸೂಲಿ ಎಂಬ ಒಕ್ಕಣೆಯ ಪತ್ರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಇಲಾಖೆಯ ಕ್ರಮವನ್ನು ಗಮನಿಸಿದರೆ ಅನುಮಾನ ವ್ಯಕ್ತವಾಗುತ್ತದೆ ಎಂದು ದೂರಿದರು.

ನಾಳೆಯಿಂದ ಆಪ್ ಮುಖಾಂತರ ಬಾಡಿಗೆ ಹೋಗುವ ಆಟೋರಿಕ್ಷಾ ಮತ್ತು ಅದರ ಚಾಲಕರ ವಿರುದ್ಧ ಕ್ರಮಕ್ಕೆ ಇಳಿಯುತ್ತಾರೆ ಹೊರತು, ಕಂಪನಿಯಿಂದ ಆಪ್ನ ಅಪ್ಲಿಕೇಷನ್ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂಬುದು ನಮಗೆ ಖಚಿತವಾಗಿದೆ.

ಆದ್ದರಿಂದ ಇಷ್ಟು ವರ್ಷಗಳ ಕಾಲ ಅಕ್ರಮವಾಗಿ ವಸೂಲಿ ಮಾಡಿದವರನ್ನು ಬಿಟ್ಟು , ದಿನಿತ್ಯದ ಪ್ರಯಾಣಿಕರ ಬಾಡಿಗೆಯಿಂದ ಬರುವ ಸಂಪಾದನೆಯಲ್ಲಿ ಜೀವನ ನಡೆಸುವ ಚಾಲಕ ವರ್ಗದ ಮೇಲೆ ಪ್ರಹಾರ ಮಾಡಿದರೆ ಸರ್ಕಾರ ಮತ್ತು ಸಾರಿಗೆ ಇಲಾಖೆ ಇದರ ನೇರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿ.ಎನ್.ಶ್ರೀನಿವಾಸ್, ಎನ್ ಮಾಯಾಲಗು, ರಘು ನಾರಾಯಣಗೌಡ, ಹರೀಶ್. ವಿ, ಚಂದ್ರಶೇಖರ್, ಜವರೇಗೌಡ ಮುಂತಾದವರು ಉಪಸ್ಥಿತರಿದ್ದರು

Articles You Might Like

Share This Article