ಬೆಂಗಳೂರು,ಡಿ.26- ಹೊಸ ವರ್ಷಕ್ಕೆ ಜನಸಾಮಾನ್ಯರಿಗೆ ಆಟೋ ದರ ಏರಿಕೆ ಬಿಸಿ ದಟ್ಟುವ ಸಾಧ್ಯತೆ ದಟ್ಟವಾಗಿದೆ. ಪ್ರತಿ ಒಂದು ಕಿಲೋ ಮೀಟರ್‌ಗೆ 5 ರೂ. ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.ತೈಲಬೆಲೆ ಏರಿಕೆ, ಬಿಡಿಭಾಗಗಳ ಬೆಲೆ ಏರಿಕೆ, ದೈನಂದಿನ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಆಟೋ ದರವನ್ನು ಏರಿಸಬೇಕೆಂದು ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್‌ನವರು ಆಗ್ರಹಿಸುತ್ತಿದ್ದಾರೆ.
ಪ್ರತಿ ಒಂದು ಕಿ.ಮೀ ದೂರಕ್ಕೆ 15 ರೂ.ನಿಂದ 20 ರೂ.ಗೆ ಮತ್ತು 2 ಕಿ.ಮೀ ದೂರಕ್ಕೆ 30 ರೂ.ಗಳಿಂದ 40 ರೂ.ಗೆ ದರ ಪರಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.ದರ ಪರಿಷ್ಕರಣೆ ಕುರಿತು ಸೋಮವಾರ ರಾಜ್ಯ ಸಾರಿಗೆ ಇಲಾಖೆ ಹಾಗೂ ಆಟೋ ಯೂನಿಯನ್‌ಗಳು ಸಭೆ ನಡೆಯಬೇಕಿತ್ತು. ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿದ್ದು, ಪ್ರಯಾಣ ದರ ಹೆಚ್ಚಳ ಬೇಡಿಕೆ ಪರಿಗಣನೆಯಾಗುವ ಸಾಧ್ಯತೆ ಇದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
2021ರಲ್ಲಿ ದರಗಳನ್ನು ಪರಿಷ್ಕರಿಸಲಾಗಿತ್ತು. ಆಟೋಗಳ ಕಾರ್ಯಾಚರಣೆಯ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇಂಧನ, ಬಿಡಿಭಾಗಗಳು ಮತ್ತು ಟೈರ್‌ಗಳ ಬೆಲೆ, ಕಾರ್ಯಾಚರಣೆಯ ವೆಚ್ಚವು ಹೆಚ್ಚುತ್ತಿದೆ. ಆದರೆ, ದರ ಮಾತ್ರ ಎಂದಿನಂತೆಯೇ ಇದೆ ಎಂದು ಚಾಲಕರು ಹೇಳಿದ್ದಾರೆ.
ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಶಾಲಾ ಶುಲ್ಕ, ಆಸ್ಪತ್ರೆ ವೆಚ್ಚ ಹೀಗೆ ಎಲ್ಲದರಲ್ಲೂ ಏರಿಕೆಯಾಗಿದೆ. ಆಟೋ ಚಾಲಕರು ತಮ ಕುಟುಂಬವನ್ನು ಹೇಗೆ ನಡೆಸಬೇಕು? ಹಲವಾರು ಚಾಲಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬಡ್ಡಿ ಪಾವತಿಸಲು ಹೆಣಗಾಡುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ನೌಕರರ ವೇತನವನ್ನು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ.
ಆಟೋ ಚಾಲಕರು ಕೇವಲ ಮೀಟರ್ ದರವನ್ನು ಅವಲಂಬಿಸಿರುತ್ತಾರೆ. ಹೆಚ್ಚುತ್ತಿರುವ ವೆಚ್ಚಗಳಿಗೆ ಅನುಗುಣವಾಗಿ ದರಗಳ ನಿಯಮಿತ ಪರಿಷ್ಕರಣೆಯನ್ನು ಪರಿಗಣಿಸಬೇಕು ಎಂದು ಅನೇಕ ಚಾಲಕರು ಆಗ್ರಹಿಸಿದ್ದಾರೆ.
ಈ ಹಿಂದೆ ಆಟೋ ಚಾಲಕರು ತಮ ಗೃಹಿಣಿಯರಿಗೆ ಪ್ರತಿದಿನ 100 ರೂಪಾಯಿ ನೀಡಿ ಸ್ವಲ್ಪ ಹಣವನ್ನು ಉಳಿಸುತ್ತಿದ್ದರು. ಆದರೆ, ಈಗ ಹೆಚ್ಚುತ್ತಿರುವ ದೈನಂದಿನ ವೆಚ್ಚದಿಂದ ಕುಟುಂಬದವರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದಂತಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರು, ಉಡುಪಿ ಮತ್ತು ಶಿವಮೊಗ್ಗದಲ್ಲಿ ಆಟೋ ದರವನ್ನು ಪರಿಷ್ಕರಿಸಲಾಗಿದೆ. ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳು ಆಟೋ ಚಾಲಕರ ಮೇಲೆ ತೀವ್ರ ಪರಿಣಾಮ ಬೀರಿದೆ. ಬೈಕ್ ಟ್ಯಾಕ್ಸಿ ವಿಚಾರ ಹೈಕೋರ್ಟ್ ಅಂಗಳದಲ್ಲಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ನಂತರ ದರವನ್ನು ಪರಿಷ್ಕರಿಸಬೇಕು ಎಂದು ಕೆಲ ಆಟೋ ಚಾಲಕರು ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.