ಬೆಂಗಳೂರು, ಆ.6- ನಗರದಲ್ಲಿ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಶಿಥಿಲಗೊಂಡಿದ್ದ ಮೂರು ಅಂತಸ್ಥಿನ ಕಟ್ಟಡ ಕುಸಿದಿರುವ ಘಟನೆ ಜನನಿಬಿಡ ಅವಿನ್ಯೂ ರಸ್ತೆಯ ಬೆಳ್ಳಿ ಬಸವ ದೇವಸ್ಥಾನದ ಬಳಿ ಇಂದು ನಡೆದಿದೆ. ಬಂಡಾರಿ ಎಂಬುವರಿಗೆ ಸೇರಿದ ಕಟ್ಟಡ ಇಂದು ಮುಂಜಾನೆ ನಾಲ್ಕು ಗಂಟೆ ಸಂದರ್ಭದಲ್ಲಿ ಕುಸಿದಿದೆ.
ಈ ಕಟ್ಟಡದಲ್ಲಿ ಪ್ಲಾಸ್ಟಿಕ್ ಹಾಗೂ ಉಡುಗೊರೆ ವಸ್ತುಗಳ ಅಂಗಡಿಗಳಿದ್ದವು. ಅದು ಮುಚ್ಚಿದ್ದ ಕಾರಣಯಾವುದೇ ಜೀವಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಕ್ಕದ ಕಟ್ಟಡಗಳಿಗೆ ಹಾನಿಯಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಇದು ಹಳೆಯ ಕಟ್ಟಡವಾಗಿದ್ದು, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಶಿಥಿಲಗೊಂಡಿತ್ತು ಎಂದು ಹೇಳಲಾಗಿದೆ.
ಮೂರು ಅಂಗಡಿಗಳಲ್ಲಿದ್ದ ಕೆಲವು ವಸ್ತುಗಳು ಹಾನಿಯಾಗಿದೆ. ಮಳೆ ಬಂದಾಗಲೆಲ್ಲ ನೀರು ಸೋರುತ್ತಿತ್ತು. ಮೇಲಿನ ಮನೆ ಸುಮಾರು 20 ವರ್ಷಗಳಿಂದ ವಾಸವಿರಲಿಲ್ಲ. ಕಾಲಿಯಾಗಿಯೇ ಉಳಿದು ಭೂತಬಂಗಲೆಯಂತೆ ವಾಸವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ನಮ್ಮ ವಸ್ತುಗಳೆಲ್ಲ ಮಣ್ಣಿನಡಿ ಸಿಲುಕಿಕೊಂಡಿದೆ ಎಂದು ಅಂಗಡಿ ಮಾಲಿಕ ಅಖಿಲ್ ಹೇಳಿದ್ದಾರೆ. ಸದ್ಯದಲ್ಲೇ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಅಕ್ಕ-ಪಕ್ಕದ ಕಟ್ಟಡ ನಿವಾಸಿಗಳಿಗೂ ಎಚ್ಚರಿಕೆಯಿಂದ ಇರಲು ತಿಳಿಸಲಾಗಿದೆ ಎಂದರು.
ಈ ಕಟ್ಟಡ ಒಂದೇ ಕುಟುಂಬದ ಮೂವರು ಅಣ್ಣ-ತಮ್ಮಂದಿರ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.