ಬೆಂಗಳೂರು, ಫೆ.15- ದೇಶದ ಜನರಿಗೆ ಒಳ್ಳೆಯ ದಿನಗಳು ಬಂದಿವೆ. ಪ್ರತಿಪಕ್ಷಗಳಾದ ಜೆಡಿಎಸ್- ಕಾಂಗ್ರೆಸ್ಗೆ ಎಂದೂ ಅಚ್ಚೇದಿನ್ ಬರುವುದಿಲ್ಲ ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಬೆಂಬಲಿಸಿ ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ಅಚ್ಚೆ ದಿನ್ ಎಲ್ಲಿದೆ ಎಂದು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ.
ಒಳ್ಳೆಯ ಜನರಿಗಷ್ಟೆ ಅಚ್ಚೆದಿನ್ ಬರುತ್ತದೆ. ದೇಶದ ಜನರಿಗೆ ಈಗಾಗಲೇ ಒಳ್ಳೆಯ ದಿನಗಳು ಬಂದಿವೆ. ಕಾಂಗ್ರೆಸ್, ಜೆಡಿಎಸ್ಗೆ ಅಚ್ಚಾದಿನ ಬರುವುದಿಲ್ಲ ಎಂದಾಗ, ಜೆಡಿಎಸ್ ಬೋಜೇಗೌಡರು, ಕಾದು ನೋಡೋಣ ಎಂದರು.
ಆಗ ಮಧ್ಯ ಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ವೆಂಟಿಲೇಟರ್ನಲ್ಲಿದ್ದರೂ ನೂರು ದಿನ ಇರುತ್ತೇವೆ ಎಂಬ ವಿಶ್ವಾಸವನ್ನು ಶ್ಲಾಘಿಸಬೇಕು ಎಂದು ಲೇವಡಿ ಮಾಡಿದರು.
ಚರ್ಚೆ ಮುಂದುವರೆಸಿದ ಮಂಜುನಾಥ್, ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಸಂಕಷ್ಟಕ್ಕೀಡಾದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿದರು.
ಎರಡು ದೇಶಗಳಿಗೆ ಯುದ್ಧ ನಿಲ್ಲಿಸಲು ಸೂಚನೆ ನೀಡಿ. ನಮ್ಮ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದರು. ಅಲ್ಲಿ ಮೃತಪಟ್ಟಿದ್ದ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಯೊಬ್ಬರ ಪಾರ್ಥಿವ ಶರೀರವನ್ನು ವಾಪಾಸ್ ತರಲಾಗಿದೆ. ವಿಶ್ವದ ಯಾವುದೇ ಭಾಗದಲ್ಲಿ ಭಾರತೀಯರು ಸಂಕಷ್ಟಕ್ಕೆ ಈಡಾದರೂ ಮೋದಿ ಅವರ ಸರ್ಕಾರ ಅವರ ನೆರವಿಗೆ ನಿಲ್ಲುತ್ತಾರೆ.
ಮೋದಿ ಜಾಗತಿಕವಾಗಿ ಬಲಿಷ್ಠ ನಾಯಕನಾಗಿ ಹೊರ ಹೊಮ್ಮಿದ್ದಾರೆ. ವಿಶ್ವದ ಯಾವುದೇ ದೇಶಕ್ಕೆ ಸಂಕಟ ಬಂದರೂ ಅದನ್ನು ಬಗೆ ಹರಿಸಲು ಮೋದಿ ಬರಬೇಕು ಎಂದು ಬಯಸಲಾಗುತ್ತಿದೆ. ಇದು ಅಚ್ಚೆ ದಿನವಲ್ಲವೇ ಎಂದು ಪ್ರಶ್ನಿಸಿದರು.
ಬಡ ಕುಟುಂಬದಲ್ಲಿ ಹುಟ್ಟಿದ ಮೋದಿ ಇಂದು ವಿಶ್ವವನ್ನೇ ಆಳುವ ಮಟ್ಟಕ್ಕೆ ಬೆಳೆದಿದ್ದಾರೆ. ಇದನ್ನು ತಡೆಯಲಾರದ ಸಂಕಟವನ್ನು ನಮ್ಮಲ್ಲಿ ವಿಪಕ್ಷಗಳು ಹೊರ ಹಾಕುತ್ತಿವೆ. ಹವಾನಿಯಂತ್ರಿತ, ಶ್ರೀಮಂತರ ಕುಟುಂಬದಲ್ಲಿ ಹುಟ್ಟಿದವರು ಮಾತ್ರ ದೇಶ ಆಳಬೇಕೆ, ವಿಶ್ವಮಟ್ಟದಲ್ಲಿ ಬೆಳೆಯಬೇಕೆ ಎಂದು ಪ್ರಶ್ನಿಸಿದರು.
ಕೊರೊನಾ ಸಂಕಷ್ಟದಲ್ಲಿ ಭಾರತ ವಿಶ್ವಕ್ಕೆ ಔಷ ಪೂರೈಸಲಾಗಿದೆ ಎಂದು ಮಂಜುನಾಥ್ ಹೇಳಿದಾಗ, ಆಮ್ಲಜನಕದಿಂದ ಸತ್ತವರ ಬಗ್ಗೆಯೂ ಮಾತನಾಡಿ ಎಂದು ಸದಸ್ಯ ಯು.ಬಿ.ವೆಂಕಟೇಶ್ ಕೆಣಕಿದರು. ನಿಮ್ಮ ಪಕ್ಷವೂ ಆಮ್ಲಜನಕ ಇಲ್ಲದೆ ಸೋರಗುತ್ತಿದೆ ಎಂದು ಮಂಜುನಾಥ್ ಕೆಣಕಿದರು.
ಮಧ್ಯ ಪ್ರವೇಶಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಆಮ್ಲಜನಕ ಇಲ್ಲದಂತಹ ಪರಿಸ್ಥಿತಿಯಲ್ಲಿಲ ರಾಜ್ಯವನ್ನು ಬಿಟ್ಟು ಹೋಗಿದ್ದು ನಿಮ್ಮ ಪಕ್ಷ. ನಮ್ಮ ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ಆರು ಬೆಡ್ಗಳಿಗೆ ಆಮ್ಲಜಕನ ಪೂರೈಸಲಾಗುತ್ತಿದೆ. ಇಂದು ಎಲ್ಲಾ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಇದಕ್ಕೆ ನೀವು ಋಣಿಯಾಗಿರಬೇಕು ಎಂದರು.
ಆಮ್ಲಜನಕದಿಂದ 23ಜನ ಸತ್ತರೆ ಮೂರು ಜನ ಮಾತ್ರ ಮೃತಪಟ್ಟಿದ್ದಾರೆ ಎಂದು ಸಚಿವರು ಹೇಳಿದರು. ಈ ಸರ್ಕಾರಕ್ಕೆ ಮಾನವೀಯತೆ ಇದೆಯೇ ಎಂದು ಯು.ಬಿ.ವೆಂಕಟೇಶ್ ತಿರುಗೇಟು ನೀಡಿದರು.
ಅಲ್ಲಿ ಸತ್ತರವರಿಗಷ್ಟೆ ಅಲ್ಲ, ಕಾಂಗ್ರೆಸ್ ಪಕ್ಷಕ್ಕೂ ಆಮ್ಲಜನಕ ಬೇಕಾದ ಸ್ಥಿತಿಯಿದೆ. ಒಂದು ಸಣ್ಣಘಟನೆಯನ್ನು ಮುಂದಿಟ್ಟುಕೊಂಡು ದೇಶದಲ್ಲಿ ನಡೆದ ಒಳ್ಳೆಯ ಕೆಲಸವನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು.
#AyanuruManjunath, #Congress, #JDS, #Acchedin,