ಬಿ.ಟೆಕ್ ವಿದ್ಯಾರ್ಥಿಯನ್ನು ಕೊಂದವನಿಗೆ ಗಲ್ಲು ಶಿಕ್ಷೆ

ಅಮರಾವತಿ(ಆಂಧ್ರಪ್ರದೇಶ),ಏ.30- ಬಿ.ಟೆಕ್ ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಗುಂಟೂರು ತ್ವರಿತ ನ್ಯಾಯಾಲಯ ಮರಣದಂಡನೆ ವಿಧಿಸಿ ಆದೇಶಿಸಿದೆ. 2021ರ ಆಗಸ್ಟ್ 15ರಂದು ಚಾಕುವಿನಿಂದ ಇರಿದು ಬಿ.ಟೆಕ್ ವಿದ್ಯಾರ್ಥಿ ನಲ್ಲಪೂರ್ ರಮ್ಯಾ ಅವರನ್ನು ಕೊಲೆ ಮಾಡಿದ ಆರೋಪಿ ಶಶಿಕೃಷ್ಣಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಶಶಿಕೃಷ್ಣ ಚಾಕುವಿನಿಂದ ಇರಿದು ರಮ್ಯಾರನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ತಂದೆ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡು ಘಟನೆ ನಡೆದ 10 ಗಂಟೆಯೊಳಗೆ ನರಸರಾವ್‍ಪೇಟೆ ಸಮೀಪದ ಮಣಕಲೂರು ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದರು.

ಫೋನ್ಸಿಕ್ ತಂಡಗಳು ಎರಡು ದಿನಗಳಲ್ಲಿ ಡಿಎನ್‍ಎ ವರದಿ ಸಲ್ಲಿಸಿದ್ದವು. ತ್ವರಿತ ತನಿಖೆ ನಡೆಸಿದ ಪೊಲೀಸರು ಒಂದು ವಾರದಲ್ಲಿ ದೋಷಾರೋಪಣಪಟ್ಟಿ ಸಲ್ಲಿಕೆ ಮಾಡಿದ್ದರು. ತ್ವರಿತವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ಕು ತಿಂಗಳೊಳಗೆ ಇತ್ಯರ್ಥಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 28 ಸಾಕ್ಷ್ಯಗಳನ್ನು ಪಡೆದು ಮಹತ್ವದ ತೀರ್ಪು ನೀಡಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ್ದು, ಈ ತೀರ್ಪು ಐತಿಹಾಸಿಕವಾಗಿದ್ದು, ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃತಳ ತಂದೆ, ನನ್ನ ಮಗಳಿಗೆ ಆಗಿರುವ ಅನ್ಯಾಯ ಯಾರಿಗೂ ಆಗಬಾರದು. ದಿಶಾ ಉಪಕ್ರಮದಿಂದ ನ್ಯಾಯ ಸಿಕ್ಕಿದೆ. ಹುಡುಗಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಈ ರೀತಿ ಶಿಕ್ಷೆಯಾದರೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಹೇಳಿದ್ದಾರೆ.