ವಿಧಾನಪರಿಷತ್ ಚುನಾವಣೆ : ನಾಮಪತ್ರ ಸಲ್ಲಿಸಿದ ಬಾಬುರಾವ್ ಚಿಂಚನಸೂರ್

Social Share

ಬೆಂಗಳೂರು,ಆ.1- ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾನ ಸೇರಿದಂತೆ ಪಕ್ಷದ ಮುಖಂಡರ ಜೊತೆಗೆ ಆಗಮಿಸಿದ ಅವರು, ಚುನಾವಣೆ ಅಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಬಹುಮತ ಲಭ್ಯವಿಲ್ಲದೇ ಇರುವುದರಿಂದ ಬಾಬೂರಾವ್ ಚಿಂಚನಸೂರ್ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಬುಧವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಒಂದು ವೇಳೆ ಕಣದಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇದ್ದರೆ ಆಗಸ್ಟ್ 11…ರಂದು ಚುನಾವಣೆ ನಡೆಯಲಿದೆ.ಯಾವುದೇ ಅಭ್ಯರ್ಥಿಗಳು ಇಲ್ಲದಿದ್ದರೆ ಚಿಂಚನಸೂರ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆಯಾಗಲಿದೆ. ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಯಿಂದ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರಿಗೆ ಟಿಕೆಟ್ ನೀಡಲಾಗಿತ್ತು.

ಕೋಲಿ ಸಮಾಜದ ಹಿರಿಯ ನಾಯಕರಾಗಿರುವ 71 ವರ್ಷದ ಬಾಬೂರಾವ್ ಚಿಂಚನಸೂರ್ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜವಳಿ ಮತ್ತು ಬಂದರು, ಒಳನಾಡು ಸಾರಿಗೆ ಸಚಿವರಾಗಿದ್ದರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಕಲಬುರಗಿಯ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದ್ಕೂರು ಅವರ ಎದುರು 2018ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಆ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ಸಿ.ಎಂ.ಇಬ್ರಾಹಿಂ ಅವರು ಕಳೆದ ಮಾರ್ಚ್ 31ರಂದು ನೀಡಿದ ರಾಜೀನಾಮೆಯಿಂದ ಪರಿಷತ್‍ನ ಒಂದು ಸ್ಥಾನ ತೆರವಾಗಿತ್ತು. ಇದಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಸದಸ್ಯತ್ವದ ಅವಧಿ 11 ತಿಂಗಳಷ್ಟೇ ಇದೆ. ಇಬ್ರಾಹಿಂ ಅವರು ಈಗ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ.

ಬಾಬುರಾವ್ ಚಿಂಚನಸೂರ್ ಅವರು ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಹಾಗೂ ಚಿತ್ತಾಪುರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2016ರಲ್ಲಿ ಸಂಪುಟದಿಂದ ಕೊಕ್ ನೀಡಲಾಗಿತ್ತು. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆಗೆ ಅವಕಾಶ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡು ಬಿಜೆಪಿ ಸೇರ್ಪಡೆಯಾಗಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ರ್ಪಧಿಸಿ ಪರಾಭವಗೊಂಡರು. ಆದರೂ, ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದರು.

ಕೋಲಿ ಸಮಾಜದ ಪ್ರಮುಖ ನಾಯಕರಾಗಿರುವ ಚಿಂಚನಸೂರ್ ಅವರಿಗೆ ಬಿಜೆಪಿ ಮತ್ತೆ ಮೇಲ್ಮನೆಗೆ ಅವಕಾಶ ನೀಡಿದ್ದು, ಈ ಮೂಲಕ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತವರಿನಲ್ಲಿ ಠಕ್ಕರ್ ಕೊಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Articles You Might Like

Share This Article