ಮೇಲ್ಮನೆ ನೂತನ ಸದಸ್ಯರಾಗಿ ಚಿಂಚನಸೂರ್ ಪ್ರಮಾಣ ವಚನ

Social Share

ಬೆಂಗಳೂರು,ಆ.5- ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಇಂದು ವಿಧಾನಪರಿಷತ್‍ನ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದಲ್ಲಿಂದು ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಸಮ್ಮುಖದಲ್ಲಿ ನೂತನ ಸದಸ್ಯರಾಗಿ ಚಿಂಚನಸೂರ್ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಒಂದು ಮೇಲ್ಮನೆ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಚಿಂಚನಸೂರ್ ಅವಿರೋಧವಾಗಿ ಆಯ್ಕೆಯಾಗಿದ್ದರು.
ಮೇಲ್ಮನೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಚಿಂಚನಸೂರ್ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ಚುನಾವಣೆಗೆ ಸ್ರ್ಪಧಿಸದೆ ಇದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದರು.

ಪ್ರಮಾಣ ವಚನ ಸ್ವೀಕಾರದ ನಂತರ ಮಾತನಾಡಿದ ಚಿಂಚನಸೂರ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.40ರಷ್ಟು ಕೋಲಿ ಸಮಾಜದವರಿದ್ದಾರೆ. ಆ ಭಾಗದಲ್ಲಿ ಹೆಚ್ಚಾಗಿರುವ ಕೋಲಿ ಸಮಾಜಕ್ಕೆ ಪ್ರಾತಿನಿಧ್ಯ ನೀಡಲು ನನ್ನನ್ನು ಗುರುತಿಸಿ ಮೇಲ್ಮನೆ ಸದಸ್ಯನನ್ನಾಗಿ ಬಿಜೆಪಿ ಮಾಡಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಪ್ರಬಲ ಶಕ್ತಿ ಬಂದಂತಾಯಿತು.

ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಳ್ಳುವುದಲ್ಲದೆ ಚುನಾವಣೆಯಲ್ಲಿ ಜಯಭೇರಿ ಭಾರಿಸಲಿದೆ ಎಂದರು.
ಈ ಹಿಂದೆ ನಾನು ಎಐಸಿಸಿ ಕಾರ್ಯದರ್ಶಿಯಾಗಿದ್ದೆ. ಈಗ ಬಿಜೆಪಿ ನನ್ನ ಶಕ್ತಿಯನ್ನು ಗುರುತಿಸಿ ಈ ಸ್ಥಾನ ನೀಡಿದೆ. ನನ್ನೊಂದಿಗೆ ಎಲ್ಲ ಮುಖಂಡರು ಬಿಜೆಪಿ ಸೇರಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಹಾಗೂ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

Articles You Might Like

Share This Article