ರೈಲು ಸೀಟಿನ ಕೆಳಗೆ ಒಂದು ವರ್ಷದ ಹೆಣ್ಣು ಶಿಶು ಪತ್ತೆ

Spread the love

ತುಮಕೂರು, ಜು.10- ಬೆಂಗಳೂರಿನಿಂದ ತುಮಕೂರಿಗೆ ಹೊರಟ ರೈಲಿನಲ್ಲಿ ಒಂದು ವರ್ಷದ ಹೆಣ್ಣು ಮಗುವನ್ನು ಸೀಟಿನ ಕೆಳಗೆ ಬಟ್ಟೆಯಲ್ಲಿ ಸುತ್ತಿ ಹೃದಯಹೀನರು ಮಲಗಿಸಿ ಹೋಗಿರುವ ಹೀನಾಯ ಘಟನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.  ಈ ದೃಶ್ಯ ನೋಡಿದರೆ ಎಂತಹ ಕಲ್ಲು ಮನಸ್ಸೂ ಸಹ ಕರಗುತ್ತಿದೆ. ಇಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ತುಮಕೂರಿಗೆ 8 ಗಂಟೆಗೆ ತಲುಪಿದೆ.

ಈ ರೈಲು ಪುನಃ ಬೆಂಗಳೂರಿಗೆ 8 ಗಂಟೆಗೆ ತೆರಳುತ್ತಿದ್ದರಿಂದ ಪ್ರಯಾಣಿಕರು ಹತ್ತಿದ್ದಾರೆ. ಈ ವೇಳೆ ಮಗುವಿನ ಚೀರಾಟ ಕೇಳಿ ಸೀಟಿನ ಕೆಳಗೆ ನೋಡಿದ್ದಾರೆ. ಆಗ ಬಟ್ಟೆಯಲ್ಲಿ ಸುತ್ತಿದ್ದ ಮಗುವು ಉಸಿರಾಟದ ತೊಂದರೆಗೆ ಸಿಲುಕಿರುವುದನ್ನು ಗಮನಿಸಿ ತಕ್ಷಣ ಮಗುವನ್ನು ಎತ್ತಿ ಸೀಟಿನ ಮೇಲೆ ಮಲಗಿಸಿ ತುಮಕೂರಿನ ರೈಲ್ವೆ ಇನ್‍ಸ್ಪೆಕ್ಟರ್ ಕುಬೇರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ.

ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಗುವನ್ನು ವಶಕ್ಕೆ ಪಡೆದು ಫೋಷಕರಿಗಾಗಿ ಹುಡುಕಾಡಿದರಾದರೂ ಪತ್ತೆಯಾಗಿಲ್ಲ. ಹೆಣ್ಣು ಮಗುವೆಂದು ಹೆತ್ತ ತಾಯಿಯೇ ಸೀಟಿನ ಕೆಳಗೆ ಮಲಗಿಸಿ ಹೋಗಿದ್ದಾಳೋ ಅಥವಾ ತಾನು ಮಾಡಿದ ತಪ್ಪಿನಿಂದ ಈ ಕೂಸನ್ನು ಹೆತ್ತು ಎಲ್ಲಿಯೇ ಒಂದು ವರ್ಷ ಬೆಳೆಸಿ ತದನಂತರ ಸಮಾಜಕ್ಕೆ ಹೆದರಿ ಬಿಟ್ಟುಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ರೈಲ್ವೆ ಪೊಲೀಸರು ಮಗುವನ್ನು ಠಾಣೆಗೆ ಕರೆದೊಯ್ದು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದು, ಸಹಾಯವಾಣಿಯ ರಾಧಾಮಣಿ ಅವರು ಮಗುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಗು ತುಂಬಾ ಸಮಯದಿಂದ ಅತ್ತಿರುವುದರಿಂದ ಸುಸ್ತಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ತನ್ನದಲ್ಲದ ತಪ್ಪಿಗೆ ಶಿಕ್ಷೆಯೇಕೆ? ಮಗುವಿನ ಆರ್ತನಾದ: ಹೆಣ್ಣು ಮಗುವಾಗಿ ಹುಟ್ಟಿದ್ದೇ ತಪ್ಪೆ, ಇಲ್ಲವೆ ನೀವು ಮಾಡಿದ ತಪ್ಪಿಗೆ ನನಗೇಕೆ ಈ ಶಿಕ್ಷೆ ಎಂಬಂತೆ ಮಮ್ಮಲ ಮರುಗುತ್ತಿದೆ ಈ ಹೆಣ್ಣು ಶಿಶು.

ಈ ಮಗು ನೋಡಲು ಮುದ್ದಾಗಿದೆ. ತುಮಕೂರಿನ ಹಲವಾರು ಮಂದಿ ನಾಗರಿಕರು ಹೆಣ್ಣು ಮಗುವನ್ನು ಬಿಟ್ಟುಹೋದ ಕಟುಕರಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ಟಾರೆ ಈ ಮಗು ಎಲ್ಲಿಯೇ ಬೆಳೆಯಲಿ. ಚೆನ್ನಾಗಿರಲಿ. ಮಗುವಿನ ಭವಿಷ್ಯ ಉಜ್ವಲವಾಗಿರಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.