ಬಾಗಲಕೋಟೆ, ಜು.15- ಬಾದಾಮಿಯ ಕುಳಗೇರಿ ಕ್ರಾಸ್ ಡಾಬಾ ಬಳಿ ಹಲ್ಲೆಗೊಳಗಾಗಿದ್ದ ವ್ಯಕ್ತಿಯ ಕುಟುಂಬಕ್ಕೆ ಹಣ ನೀಡಿ ಸಂತೈಸಲು ಬಂದ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಸ್ಥಳೀಯ ಶಾಸಕ ಸಿದ್ದರಾಮಯ್ಯಅವರನ್ನು
ತರಾಟೆಗೆ ತೆಗೆದುಕೊಂಡು ನೀಡಿದ ಹಣವನ್ನು ಅವರ ವಾಹನದ ಮೇಲೆ ಎಸೆದಿರುವ ಘಟನೆ ನಡೆದಿದೆ.
ಹಲ್ಲೇಯಲ್ಲಿ ಗಾಯಗೊಂಡಿದ್ದ ಮಹಮ್ಮದ್ ಹನೀಫ್ ಸೇರಿದಂತೆ ನಾಲ್ವರಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ ತಲಾ 50 ಸಾವಿರ ಹಣವನ್ನು ವೈಯಕ್ತಿಕವಾಗಿ ನೀಡಿದರು. ಘಟನೆ ನಡೆದು ಇಷ್ಟು ದಿನ ಕಳೆದರೂ ಯಾರೂ ಬಂದು ನಮ್ಮ ಕಷ್ಟವನ್ನು ಕೇಳಿಲ್ಲ. ಕೆಲ ಸಚಿವರು ಬಂದು ಕೆಲವರನ್ನಷ್ಟೇ ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಎಚ್.ವೈ.ಮೇಟಿ ಸೇರಿದಂತೆ ಯಾರೂ ನಮ್ಮ ನೋವನ್ನು ಕೇಳಲು ಬಂದಿಲ್ಲ. ಈಗ ನೀವು ಬಂದಿದ್ದೀರಿ. ನೀವು ನೀಡುವ ಹಣ ನಮಗೆ ಬೇಡ, ವಾಪಸ್ ತೆಗೆದುಕೊಳ್ಳಿ ಎಂದು ಹೇಳಿದರು. ಆಗ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿ ಹೊರಹೋಗುತ್ತಿದ್ದಾಗ ಹಿಂಬಾಲಿಸಿದ ಗಾಯಾಳು ಕುಟುಂಬಸ್ಥರು ಹಣ ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಅವರಿಗೆ ಸಮಾಧಾನ ಹೇಳಿ ಕಾರಿನಲ್ಲಿ ಕುಳಿತು ಸಿದ್ದರಾಮಯ್ಯ ಹೊರಡಲು ಸಿದ್ಧರಾದರು. ಆದರೂ ಅವರ ಕೋಪ ತಣ್ಣಗಾಗಲಿಲ್ಲ. ಸಿದ್ದರಾಮಯ್ಯ ಅವರಿದ್ದ ಕಾರು ಮುಂದಕ್ಕೆ ಹೋಗುತ್ತಿದ್ದಂತೆ ನೀವು ನೀಡಿದ ಹಣ ನಮಗೆ ಬೇಡ ಎಂದು ಕಾರಿನ ಮೇಲೆ ಎಸೆದರು. ಈ ಘಟನೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.