ಬೆಂಗಳೂರು,ಸೆ.19- ಬಗರ್‍ಹುಕುಂ ಸಾಗುವಳಿ ಉಳುಮೆದಾರರಿಗೆ ಜಮೀನನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಕೆಗೆ ಮತ್ತೊಂದು ಅವಕಾಶವನ್ನು ನೀಡಲಾಗಿದೆ. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ 2022ರ ತಿದ್ದುಪಡಿಯನ್ನು ಮುಖ್ಯಮಂತ್ರಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಪರಿಷತ್‍ನಲ್ಲಿ ಮಂಡಿಸಿದರು.
ಕಾಯ್ದೆಯ ಕುರಿತು ವಿವರಣೆ ನೀಡಿದ ಅವರು, 2005ರ ಜನವರಿ 1ರ ಹಿಂದಿನ ಸಾಗುವಳಿದಾರರಿಗೆ 2018 ಮಾರ್ಚ್ 17ರಿಂದ 2019ರ ಮಾರ್ಚ್ 16ರವರೆಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ 2019ರ ಮಾರ್ಚ್ 10ರಿಂದ ಅರ್ಜಿಗಳನ್ನು ಸ್ವೀಕರಿಸಲಾಗಿಲ್ಲ. ಹೀಗಾಗಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರು 2022ರ ಮೇ 26ರಿಂದ ಒಂದು ವರ್ಷಗಳ ಅವಧಿಯವರೆಗೂ ಬಗರ್‍ಹುಕುಂ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲ ಅವಕಾಶ ನೀಡಲಾಗಿದೆ ಎಂದರು.
ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಈಗಾಗಲೇ ಸಲ್ಲಿಸಿರುವ ಅರ್ಜಿಗಳ ಪೈಕಿ 6302 ಬಾಕಿ ಉಳಿದಿವೆ. ಅವುಗಳೇ ಇತ್ಯರ್ಥಗೊಳ್ಳದೆ ಇರುವಾಗ ಹೊಸದಾಗಿ ಅರ್ಜಿ ಕರೆಯುವ ಅಗತ್ಯವಿದೆ ಏನಿದೆ ಎಂದು ಪ್ರಶ್ನಿಸಿದರು.
ಬಗರ್‍ಹುಕುಂ ಸಾಗುವಳಿ ಹೆಸರಿನಲ್ಲಿ ಸರ್ಕಾರಿ ಜಮೀನು ದುರುಪಯೋಗವಾಗುವ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಚಿವರು, 4 ಎಕರೆ 38 ಗುಂಟೆ ಒಳಗಿನ ಜಮೀನಿಗೆ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತಿದೆ. ಹೀಗಾಗಿ ಜಮೀನು ದುರುಪಯೋಗವಾಗುವ ಅವಕಾಶಗಳು ಕಡಿಮೆ ಎಂದರು.
ನಂತರ ಮುಖ್ಯಮಂತ್ರಿಗಳ ಪರವಾಗಿ ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ಹಲವು ಸದಸ್ಯರ ಚರ್ಚೆಯ ಮೂಲಕ ದನಿಮತದಿಂದ ಎರಡು ವಿಧೇಯಕಗಳನ್ನು ಅಂಗೀಕರಿಸಲಾಯಿತು.