ಬೆಂಗಳೂರು, ಫೆ.21- ಶಿವಮೊಗ್ಗದಲ್ಲಿ ನಡೆದ ಹಿಂದೂಪರ ಕಾರ್ಯಕರ್ತ ಹರ್ಷ ಕೊಲೆ ಘಟನೆ ಹಿಂಸಾಚಾರಕ್ಕೆ ತಿರುಗಿದೆ. ಹರ್ಷ ಅವರ ಪಾರ್ಥಿವ ಶರೀರದ ಮೆರವಣಿಗೆ ಸಂದರ್ಭದಲ್ಲಿ ಹೊಟೇಲ್, ಕಟ್ಟಡಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಕಿಡಿಗೇಡಿಗಳು ಹಲವು ವಾಹನಗಳಿಗೆ ಬೆಂಕಿ ಇಟ್ಟಿದ್ದು ಮತ್ತೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಪರಿಸ್ಥಿತಿ ನಿಭಾಯಿಸಲು ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಇಂದು ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಯಿಂದ ಹರ್ಷ ನಿವಾಸವಿರುವ ಬಸವನಬೀದಿಗೆ ಮೃತ ದೇಹವನ್ನು ಮೆರವಣಿಗೆ ಮೂಲಕ ಕೊಂಡೊಯ್ಯುವಾಗ ಬಸ್ ನಿಲ್ದಾಣದ ಬಳಿ ಅಶೋಕ ವೃತ್ತದ ಹೊಟೇಲ್ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ಕ್ಲಾರ್ಕ್ ಪೇಟೆ, ಎನ್‍ಟಿ ರಸ್ತೆಯಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಆಜಾದ್ ಗಲ್ಲಿಯಲ್ಲಿ ಎರಡು ಬೈಕ್‍ಗಳಿಗೆ ಬೆಂಕಿ ಹಚ್ಚಿದ್ದಾರೆ. ಬೈಕ್, ತಳ್ಳುವ ಗಾಡಿ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ.ಬಿಬಿ ಸ್ಟ್ರೀಟ್‍ನ ಸತ್ಯಪ್ರಮೋದ್ ಕಲ್ಯಾಣ ಮಂಟಪದ ಬಳಿ ತಳವಾರ್‍ನಿಂದ ಒಬ್ಬ ವ್ಯಕ್ತಿಗೆ ಹಲ್ಲೆ ಮಾಡಲಾಗಿದೆ. ಕೊಲೆ ನಡೆದ ಸೀಗೆಹಟ್ಟಿ ಭಾಗದಲ್ಲೂ ಕಲ್ಲು ತೂರಾಟ ನಡೆದಿದ್ದು, ಘಟನೆಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಯಾವುದೇ ರೀತಿಯ ಹೆಚ್ಚಿನ ಅಹಿತಕರ ಘಟನೆಗಳು ನಡೆಯದಂತೆ ಆರ್‍ಎಎಫ್, ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಹಿಂದೂಪರ ಕಾರ್ಯಕರ್ತನ ಕೊಲೆ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ಸ್ಥಳಕ್ಕೆ ಎಸ್‍ಪಿ ಲಕ್ಷ್ಮಿ ಪ್ರಸಾದ್ ಮತ್ತು ಜಿಲ್ಲಾಧಿಕಾರಿ ಸೆಲ್ವಮಣಿ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಂದು ಶಿವಮೊಗ್ಗದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಆರೋಪಿಗಳನ್ನು ಕೂಡಲೇ ಬಂಸಲಾಗುವುದು. ಯಾರೂ ತಾಳ್ಮೆ ಕಳೆದುಕೊಳ್ಳದಂತೆ ಶಾಂತಿ-ಸಂಯಮದಿಂದ ವರ್ತಿಸಿ ಎಂದು ಜಿಲ್ಲಾಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಹಿಂದೂಪರ ಕಾರ್ಯಕರ್ತ ಹರ್ಷ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತೀರ್ಥಹಳ್ಳಿ ರಸ್ತೆಯ ಭಾರತಿ ಕಾಲೋನಿಯಲ್ಲಿ ನಿನ್ನೆ ರಾತ್ರಿ ನಡೆದಿದ್ದು, ಘಟನೆಯಿಂದಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ಹಲವೆಡೆ ಕಲ್ಲು ತೂರಾಟ ನಡೆದಿತ್ತು.
ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಘ ಲಾಠಿ ಪ್ರಹಾರ ನಡೆಸಿದ್ದರು. ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ತರುತ್ತಿದ್ದಂತೆ ಆಸ್ಪತ್ರೆ ಮುಂದೆ ನೂರಾರು ಜನ ಜಮಾಯಿಸಿ ಆಸ್ಪತ್ರೆ ಮೇಲೂ ಕೂಡ ಕಲ್ಲು ತೂರಾಟ ಮಾಡಿದ್ದರಿಂದ ಆಸ್ಪತ್ರೆಯ ಗಾಜುಗಳಿಗೂ ಕೂಡ ಹಾನಿಯಾಗಿತ್ತು.
