ಮತ್ತೆ ಆಟೋ, ದ್ವಿಚಕ್ರ ವಾಹನಗಳಿಗೆ ಬೆಂಕಿ, ಶಿವಮೊಗ್ಗ ಇನ್ನೂ ಪ್ರಕ್ಷುಬ್ಧ..

ಶಿವಮೊಗ್ಗ,ಫೆ.22- ಭಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆ ಬಳಿಕ ಶಿವಮೊಗ್ಗ ನಗರದಾದ್ಯಂತ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದೆ. ದುಷ್ಕರ್ಮಿಗಳು ಇಂದು ಪುನಃ ಎರಡು ಆಟೋ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಕೋಮು ಸೌಹಾರ್ದತೆಗೆ ಭಂಗ ತರುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಧಕ್ಕೆ ತರುವ, ಜೀವಹಾನಿ ಸಂಭವಿಸಬಹುದಾದ ಸಾಧ್ಯತೆಯಿರುವುದರಿಂದ ಜಿಲ್ಲೆಯಲ್ಲಿ ಈಗಾಗಲೇ ಎರಡು ದಿನಗಳ ಕಾಲ ಕಫ್ರ್ಯೂ ಜಾರಿ ಮಾಡಲಾಗಿದೆ. ಇಂದು ಕೂಡ ಶಿವಮೊಗ್ಗದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಹೊರಡಿಸಲಾಗಿದೆ.

ಶಿವಮೊಗ್ಗ ನಗರದಾದ್ಯಂತ ಕಫ್ರ್ಯೂ ಜಾರಿ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ವಾಹನದಲ್ಲಿ ಬಂದು ಮೈಕ್ ಮೂಲಕ, ನಾಗರಿಕರು ಯಾರೂ ಹೊರಗೆ ಬರಬಾರದು, ಗುಂಪಾಗಿ ನಿಲ್ಲಬಾರದು ಎಂದು ಘೋಷಣೆ(ಅನೌನ್ಸ್ ಮೆಂಟ್) ಮಾಡುತ್ತಿರುವುದು ಕಂಡುಬಂತು. ಯಾರೂ ಕೂಡ ಮನೆಯಿಂದ ಹೊರಗೆ ಬರಬಾರದು, ಅಂಗಡಿ-ಮುಂಗಟ್ಟುಗಳನ್ನು ತೆರೆಯಬಾರದು, ಜನರು ಬರಬಾರದು ಎಂದು ನಗರಾದ್ಯಂತ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ.

ನಗರದ ಸೂಕ್ಷ್ಮ ಪ್ರದೇಶಗಳ ಪ್ರವೇಶಕ್ಕೆ ಜನರಿಗೆ ನಿರ್ಬಂಧ ವಿಸಲಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಬ್ಯಾರಿಕೇಡ್ ಗಳನ್ನು ಪೊಲೀಸರು ಅಳವಡಿಸಿದ್ದಾರೆ. ಬಿ.ಎಚ್.ರಸ್ತೆ ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಪೊಲೀಸ್ ಸರ್ಪಗಾವಲು: ಗಲಭೆ ಪೀಡಿತ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರವು ಮೂರು ಎಸ್ಪಿಗಳು, ಒಬ್ಬ ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿಗಳು, 39 ಪಿಐಗಳು, 54 ಪಿಎಸ್‍ಐಗಳು, 48 ಎಎಸ್‍ಐಗಳು, 819 ಎಚ್‍ಸಿ/ಪಿಸಿಗಳು, 20 ಕೆಎಸ್‍ಆರ್‍ಪಿ, ಬೆಟಾಲಿಯನ್‍ಗಳು, 10 ಡಿಎಆರ್ ಬೆಟಾಲಿಯನ್‍ಗಳು ಮತ್ತು ಒಂದು ಆರ್ ಎಫ್ ಎಫ್ ಬೆಟಾಲಿಯನ್‍ನ್ನು ನಿಯೋಜಿಸಲಾಗಿದೆ.

ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಶಿವಮೊಗ್ಗದ ಪರಿಸ್ಥಿತಿ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ. ನಿನ್ನೆ ಹರ್ಷನ ಕಗ್ಗೊಲೆ ನಂತರ ಮೃತದೇಹ ಮೆರವಣಿಗೆ ಹಿನ್ನೆಲೆಯಲ್ಲಿ ಉದ್ರಿಕ್ತರಿಂದ ಕಲ್ಲು ತೂರಾಟ ನಡೆಸಲಾಗಿದೆ.

ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತವಾಗಿದೆ. ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದ ಬಳಿ ಕಲ್ಲು ತೂರಾಟ ನಡೆಸಲಾಗಿದೆ.
ಶಿವಮೊಗ್ಗ ಬಿ.ಹೆಚ್. ರಸ್ತೆಯಲ್ಲಿ ಹಣ್ಣಿನ ಅಂಗಡಿ ಮೇಲೆ ಕಲ್ಲೆಸೆತವಾಗಿದೆ. ಶೋ ರೂಮ್, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ, ಅನೇಕ ಮನೆಗಳು, ಅಂಗಡಿ-ಮುಂಗಟ್ಟು, ವಾಹನಗಳು ಹಾನಿಗೀಡಾಗಿವೆ.