ಕೋಮು ಸಂಘರ್ಷದ ಪಾಠ ಮಾಡಿದ ಕಾಂಗ್ರೆಸ್‍ಗೆ ಸಿಎಂ ತಿರುಗೇಟು

Social Share

ಬೆಂಗಳೂರು,ಫೆ.23- ಈ ಹಿಂದೆ ರಾಜ್ಯದ ನಾನಾ ಕಡೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಾಯೋಜಿತ ಕೋಮು ಸಂಘರ್ಷ ನಡೆಸಿದ ಅನುಭವದ ಆಧಾರದ ಮೇಲೆ ನಮಗೆ ನೀತಿ ಪಾಠ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗ ಗಲಭೆ ಸರ್ಕಾರಿ ಪ್ರಾಯೋಜಿತ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್‍ನವರು ಅಧಿಕಾರದಲ್ಲಿದ್ದಾಗ ಇದನ್ನೇ ಮಾಡಿರುವ ಅನುಭವದಲ್ಲಿ ಹೇಳುತ್ತಿದ್ದಾರೆ. ನಮಗೆ ಅವರಿಂದ ನೀತಿ ಪಾಠ ಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕತ ಹರ್ಷ ಕಗ್ಗೊಲೆ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಶಾಂತಿಯುತವಾಗಿ ಇದೆ ಎಂದು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿಧ ತುಕಡಿಗಳು ಈಗಲೂ ಸ್ಥಳದಲ್ಲಿಯೇ ಬೀಡುಬಿಟ್ಟಿವೆ. ಮುನ್ನೆಚ್ಚರಿಕಾ ಕ್ರಮವಾಗಿ 144 ಸೆಕ್ಷನ್ ಹಾಕಲಾಗಿದೆ. ಸದ್ಯಕ್ಕೆ ದಿನ ಕಳೆದಂತೆ ಪರಿಸ್ಥಿತಿ ಸುಧಾರಿಸುತ್ತಿದ್ದು, ಯಾವುದೇ ರೀತಿಯ ಅಹಿತರ ಘಟನೆಗಳು ಮರುಕಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮೊದಲು ನಾವು ಪರಿಸ್ಥಿತಿಯನ್ನು ಸುಧಾರಿಸಿ ಶಾಂತಿಯ ವಾತಾವರಣ ನಿರ್ಮಿಸಬೇಕು. ಇದಕ್ಕಾಗಿ ಜನಪ್ರತಿನಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ. ಈ ಘಟನೆಯಿಂದಾಗಿ ಜನರು ಕೊಂಚ ಆತಂಕಕ್ಕೀಡಾಗಿರುವುದು ಸುಳ್ಳಲ್ಲ. ಸರ್ಕಾರ ಪರಿಸ್ಥಿತಿ ನಿಭಾಯಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ವಹಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಈಗಾಗಲೇ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಎರಡು ದಿನದೊಳಗೆ ಪ್ರಮುಖ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಪೊಲೀಸರ ತನಿಖಾ ವರದಿಯಲ್ಲಿ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಾರೆ. ಅವರ ತನಿಖಾ ವರದಿಯಲ್ಲಿ ಏನು ಬರುತ್ತದೆ ಎಂಬುದರ ಮೇಲೆ ಮುಂದಿನ ಹಂತದಲ್ಲಿ ಯಾವ ಸಂಸ್ಥೆಯಿಂದ ತನಿಖೆ ಮಾಡಬೇಕೆಂದು ನಿರ್ಧರಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟನೆ ನೀಡಿದರು.
ಶಾಲಾಕಾಲೇಜುಗಳು ಸಹಜ ಸ್ಥಿತಿಗೆ ಮರಳಬೇಕು. ಈ ಘಟನೆಯಿಂದಾಗಿ ರಜೆ ನೀಡಲಾಗಿದೆ. ಪರೀಕ್ಷೆಗಳು ಸಮೀಪದಲ್ಲಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು. ಮೊದಲು ಶಾಂತಿ ಸುವ್ಯವಸ್ಥೆಗೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಹೇಳಿದರು.
ಇದೇ 25ರಂದು ದೆಹಲಿಗೆ ಭೇಟಿ ನೀಡುತ್ತಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಅವರು, ಸದ್ಯಕ್ಕೆ ನಾನು ಅಲ್ಲಿಗೆ ತೆರಳುವ ಉದ್ದೇಶವಿಲ್ಲ. ಅಂತಹ ಸಂದರ್ಭ ಬಂದಾಗ ಖಂಡಿತವಾಗಿಯೂ ಮಾಧ್ಯಮಗಳಿಗೆ ಹೇಳಿಯೇ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.

Articles You Might Like

Share This Article