ಹರ್ಷ ಹತ್ಯೆಗೆ ಅಸಲಿ ಕಾರಣವೇನು..? ಗೃಹ ಸಚಿವರು ಹೇಳಿದ್ದೇನು..?

Social Share

ಬೆಂಗಳೂರು,ಫೆ.22- ಶಿವಮೊಗ್ಗದಲ್ಲಿ ನಡೆದ ಯುವಕನ ಹತ್ಯೆ ಘಟನೆಯ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಷಯಕ್ಕಾಗಿದೆಯೇ? ಮತೀಯ ಸಂಘಟನೆ ಹಿನ್ನೆಲೆ ಇದೆಯೇ? ಯಾರು ಹಣ ಒದಗಿಸಿದರು? ಯಾರು ವಾಹನ ಒದಗಿಸಿದ್ದಾರೆ ಎಂಬುದು ಸೇರಿದಂತೆ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಈ ರೀತಿಯ ಕೊಲೆಗಳು ನಿಲ್ಲಬೇಕು. ಹರ್ಷನ ಹತ್ಯೆಯೇ ಕೊನೆಯ ಕೊಲೆಯಾಗಬೇಕು. ಈ ಘಟನೆಗೆ ಸಂಬಂಧಿಸಿದಂತೆ ಮೂರು ಮಂದಿಗಳನ್ನು ಬಂಧಿಸಲಾಗಿದೆ. 12ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು. ಹತ್ಯೆಯಲ್ಲಿ ಯಾರು ಭಾಗಿಯಾಗಿದ್ದಾರೆ ಅವರು ಎಲ್ಲೇ ಇದ್ದರೂ ಬಂಧಿಸಬೇಕು. ಆದರೆ ಅಮಾಯಕರನ್ನು ಬಂಧಿಸುವುದಿಲ್ಲ.
ಈ ಘಟನೆಯ ಹಿನ್ನಲೆ, ಮುನ್ನಲೆ ಎಲ್ಲವೂ ಹೊರಗೆ ಬರಬೇಕಾಗಿದೆ. ಹಿರಿಯ ಅಧಿಕಾರಿಗಳು ಶಿವಮೊಗ್ಗದಲ್ಲಿದ್ದು ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ. ಅಲ್ಲಲ್ಲಿ ಕೆಲವು ಘಟನೆಗಳು ನಡೆದಿವೆ. ಕಾನೂನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಶಿವಮೊಗ್ಗದಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದೆವು. ಶಾಂತಿ ಕದಡಲು ಅವಕಾಶ ಮಾಡಿಕೊಡಬೇಡಿ. ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ರೀತಿಯಲ್ಲಿ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಾಡಿದ ಮನವಿಗೆ ಸಾರ್ವಜನಿಕರು ಸ್ಪಂದಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಕಾಂಗ್ರೆಸ್‍ನವರ ಟೀಕೆಗಿಂತ ರಾಜ್ಯದಲ್ಲಿ ಶಾಂತಿ ಕಾಪಾಡುವುದು ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಶಿವಮೊಗ್ಗದಲ್ಲಿ ನಡೆದಂತಹ ಘಟನೆ ಮುಂದೆ ಆಗದಂತೆ ಎಚ್ಚರ ವಹಿಸುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಮಾಧಾನಕರವಾಗಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಲಿ. ಅವರ ಸರ್ಕಾರದಲ್ಲಿ ಏನಾಗಿತ್ತು ಎಂದು ಅವರೂ ಹೇಳಲಿ, ನಾನು ಕೂಡ ಹೇಳುತ್ತೇನೆ ಎಂದು ಹೇಳಿದರು.

Articles You Might Like

Share This Article