ಗಲಭೆಗೆ ಹಿಜಾಬ್ ವಿಚಾರ ಮತ್ತು ವಿದೇಶಿ ಶಕ್ತಿಗಳ ಕೈವಾಡ ಕಾರಣ : ಸಚಿವ ಅಶೋಕ್

Social Share

ಬೆಂಗಳೂರು,ಫೆ.22- ಹಿಜಾಬ್ ವಿಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್‍ಗಾಗಿ ಹೆಣ್ಣುಮಕ್ಕಳು ಪ್ರತಿಭಟನೆ ಮಾಡಿರುವುದು ಸ್ಥಳೀಯ ಮಾಧ್ಯಮಗಳಿಗಿಂತ ವಿದೇಶಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಯಾವುದೇ ದೇಶದ್ರೋಹಿಯನ್ನು ಬಿಡುವುದಿಲ್ಲ. ಮಟ್ಟ ಹಾಕುತ್ತೇವೆ ಎಂದು ಗುಡುಗಿದರು.
ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಯುವಕನ ಹತ್ಯೆ ಪ್ರಕರಣ ಹಾಗೂ ಗಲಭೆಯಾಗಿರುವುದು ಗುಂಡಾಗಿರಿಗೆ, ನಿರಂತರವಾಗಿ ಎಸ್‍ಡಿಪಿಐ, ಪಿಎಫ್‍ಐನಂತಹ ಸಂಘಟನೆಗಳು ಕ್ರಿಯಾಶೀಲರಾಗಿರುವುದಕ್ಕೆ ನಿದರ್ಶನ. ಈ ಗಲಭೆಗೆ ಹಿಜಾಬ್ ಕಾರಣ ಎಂದು ಗೊತ್ತಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಈಗಾಗಲೇ ಹಲವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇದರಲ್ಲಿ ಪಿಎಫ್‍ಐ ಭಾಗಿಯಾಗಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಮುಖ್ಯಮಂತ್ರಿಯವರ ಜೊತೆ ಇದರ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದರು. ಸಚಿವ ಈಶ್ವರಪ್ಪನವರ ವಿಚಾರ ಪ್ರಸ್ತಾಪವಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ.
ಪೊಲೀಸ್ ಎಂಬು ಸ್ವತಂತ್ರ ಸಂಸ್ಥೆ. ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದು, ತನಿಖೆ ನಡೆಯುತ್ತಿದೆ. ಹಲವು ಜನರು ಹಲವು ಸಲಹೆಗಳನ್ನು ಕೊಡುತ್ತಾರೆ. ಅದನ್ನು ಗೌರವಯುತವಾಗಿ ತೆಗೆದುಕೊಳ್ಳುತ್ತೇವೆ. ಅಂತಿಮವಾಗಿ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಈಶ್ವರಪ್ಪನವರ ನಡುವೆ ವೈಯಕ್ತಿಕ ಜಗಳ ನಡೆದಿದೆ. ಇದೇ ವಿಚಾರಕ್ಕೆ ಅಧಿವೇಶನದಲ್ಲೂ ಧರಣಿಯಾಗುತ್ತಿದೆ. ಸಭಾಧ್ಯಕ್ಷರು ಹೇಳಿಕೆಗೆ ಡಿ.ಕೆ.ಶಿವಕುಮಾರ್ ಒಂದು ಹೇಳುತ್ತಾರೆ, ಈಶ್ವರಪ್ಪ ಮತ್ತೊಂದು ಹೇಳುತ್ತಾರೆ ಎಂದರು.
ಸದನ ನಡೆಸುವಂತೆ ಜೆಡಿಎಸ್ ಶಾಸಕರು ಧರಣಿ ನಡೆಸಿದ್ದಾರೆ. ಚರ್ಚೆಯಾದರೆ ಈಶ್ವರಪ್ಪನವರ ಮೇಲಿನ ಆರೋಪದ ಬಗ್ಗೆಯೂ ಚರ್ಚೆ ಮಾಡಬಹುದು. ಸಭಾಧ್ಯಕ್ಷರೊಂದಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನಾನೂ ಕೂಡ ಸಂಧಾನ ಮಾಡಿದೆವು. ಆದರೆ ಕಾಂಗ್ರೆಸ್‍ನವರು ಪಟ್ಟು ಹಿಡಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Articles You Might Like

Share This Article