ಔರಂಗಾಬಾದ್, ಮಾ.8 (ಪಿಟಿಐ) – ಬಕಾಪುರ ಮಹಾರಾಷ್ಟ್ರದ ಸುಮಾರು 2,000 ಜನರಿರುವ ಪುಟ್ಟ ಗ್ರಾಮವಾಗಿದೆ. ಆದರೆ ಅಲ್ಲಿನ ಪ್ರತಿಯೊಂದು ಮನೆಯೂ ಮಹಿಳೆಯೇ ಮಾಲೀಕತ್ವವನ್ನು ಹೊಂದಿರುವುದರಿಂದ ಸಾಕಷ್ಟು ಪ್ರಶಂಸೆ ಗಳಿಸುತ್ತಿದೆ. ವಿಶ್ವವು ಮಹಿಳಾ ದಿನಾಚರಣೆ ಆಚರಿಸುತ್ತಿ ರುವಾಗ, ಔರಂಗಾಬಾದ್‍ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಬಕಾಪುರದ ಪ್ರತಿ ಮನೆಯ ನಾಮಫಲಕವು ಅದರ ನಿವಾಸಿಗಳಿಗೆ ಹೆಮ್ಮೆಯ ಭಾವನೆಯನ್ನು ತರುತ್ತದೆ. ಏಕೆಂದರೆ ಅದು ಮಹಿಳೆಯ ಹೆಸರನ್ನು ನಿವಾಸದ ಮಾಲೀಕ ಅಥವಾ ಸಹ-ಮಾಲೀಕ ಎಂದು ತೋರಿಸುತ್ತದೆ.
ಈ ಗ್ರಾಮದಲ್ಲಿ ಒಬ್ಬನೇ ಒಬ್ಬ ಪುರುಷನ ಒಡೆತನವಿಲ್ಲ . ಏಕೆಂದರೆ ಗ್ರಾಮ ಪಂಚಾಯತಿ ದಾಖಲೆಗಳ ಪ್ರಕಾರ ಕುಟುಂಬದ ಮಹಿಳೆ ಸಹ ಮಾಲೀಕಳಾಗಿರಬೇಕು. ಸುದ್ದಿಗಾರರೊಂದಿಗೆ ಮಾತನಾಡಿದ ಬಕಾಪುರದ ಸರಪಂಚ್ (ಗ್ರಾಮ ಮುಖ್ಯಸ್ಥೆ) ಕವಿತಾ ಸಾಳ್ವೆ, ನನ್ನ ಗ್ರಾಮದ ಮಹಿಳೆಯರು ಮನೆಯ ವಿಷಯಗಳನ್ನೂ ಹೇಳಲು ಸಿಕ್ಕಿದ್ದಾರೆ ಎಂದು ಹಾಸ್ಯ ಚಟಾಕಿ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
2008ರಲ್ಲಿ ಗ್ರಾಮ ಪಂಚಾಯಿತಿ ಮಾಡಿದ ವಿಶೇಷ ನಿಬಂಧನೆ ಜಾರಿಗೆ ತಂದಿತ್ತು. ಆಗ ಸರಪಂಚ್ ಆಗಿದ್ದ ಸುಧಾಮ ರಾವ್ ಪಾಲಸ್ಕರ್‍ಅವರು ಗ್ರಾಮದ ಬೆಂಬಲ ನೀಡಿದ್ದರು. ಪ್ರತಿ ಕುಟುಂಬದ ಮಹಿಳೆಯನ್ನು ಅವರ ನಿವಾಸದ ಮಾಲೀಕರನ್ನಾಗಿ ಮಾಡಲು ನಿರ್ಧರಿಸಲಾಯಿತು. ಅದಕ್ಕೆ ಗ್ರಾಮ ಪಂಚಾಯಿತಿಯಲ್ಲಿದ್ದ ಎಲ್ಲಾ ಏಳು ಸದಸ್ಯರು ಸಹಮತ ವ್ಯಕ್ತಪಡಿಸಿ ಪ್ರಸ್ತಾವನೆ ಅಂಗೀಕಾರವಾಯಿತು. ಈಗ ಇದು ಇಲ್ಲಿ ಮಾಮೂಲಿ ಅಭ್ಯಾಸವಾಗಿದೆ ಎಂದು ಹೆಮ್ಮೆಯಿಂದ ಹೇಳಿದರು.
ಈ ಹಿಂದೆ ಪುರುಷರು ತಮ್ಮ ಕುಟುಂಬದವರ ಒಪ್ಪಿಗೆಯಿಲ್ಲದೆ ಮನೆಗಳನ್ನು ಮಾರಾಟ ಮಾಡುತ್ತಿದ್ದರು. ಇದರಿಂದ ಮಹಿಳೆಯರ ಮೇಲೆ ಆರ್ಥಿಕವಾಗಿ ಪರಿಣಾಮ ಬೀರುತ್ತಿತ್ತು. ಆದರೆ, ಮಹಿಳೆಯನ್ನು ಮನೆಯ ಮಾಲೀಕರಾಗಿಸುವ ನಿರ್ಧಾರ ಇಲ್ಲಿನ ಮಹಿಳೆಯರಿಗೆ ಅಧಿಕಾರ ಮತ್ತು ಭದ್ರತೆಯ ಭಾವನೆಯನ್ನು ನೀಡಿತು. ಈಗ ಅವರು ಮನೆಗೆ ಸಂಬಂಸಿದ ಹಣಕಾಸಿನ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಉಪ ಸರಪಂಚ್ ಅಜಿಜ್ ಷಾ ಮಾತನಾಡಿ, ಈ ಹಿಂದೆ ಕೆಲವು ಪುರುಷರು ವಿವಿಧ ಚಟಗಳಲ್ಲಿ ತೊಡಗಿದ್ದು, ತಮ್ಮ ಮನೆ, ಜಮೀನು ಮಾರಾಟ ಮಾಡಲು ಪ್ರಯತ್ನಿಸಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ನಕ್ಕರು.
