ಬೆಂಗಳೂರು,ಸೆ.17- ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಗುರು ಸಂಸ್ಮರಣೋತ್ಸವ ಮತ್ತು ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯಮಟ್ಟದ 43ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳವನ್ನು ಇದೇ 23ರಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಶ್ರೀ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯಸಾನ್ನಿಧ್ಯದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಬೆಳಗ್ಗೆ 43ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ ಉದ್ಘಾಟನೆ ಮತ್ತು ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದ್ದು, ಸಂಜೆ 5 ಗಂಟೆಗೆ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ನಡೆಯಲಿದ್ದು, ರಾತ್ರಿ 7 ಗಂಟೆಗೆ ಕಾಲ ಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗಲಿದೆ.
24ರಂದು ಮಧ್ಯಾಹ್ನ 2 ಗಂಟೆಗೆ ರಾಜ್ಯಮಟ್ಟದ 43ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ ಸಮಾರೋಪ ಸಮಾರಂಭ ನಡೆಯಲಿದ್ದು, 25ರಂದು ಬೆಳಗ್ಗೆ 10.30ಕ್ಕೆ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಶ್ರೀಗುರು ಸಂಸ್ಮರಣೋತ್ಸವ ನೆರವೇರಲಿದೆ.
ಜಾನಪದ ಕಲಾಮೇಳದಲ್ಲಿ ಭಾಗವಹಿಸುವ ಎಲ್ಲಾ ಕಲಾವಿದರಿಗೆ ಉಚಿತ ಊಟ, ವಸತಿಯ ಜೊತೆಗೆ ಸ್ತ್ರೀ ಕಲಾವಿದರಿಗೆ ಸೀರೆ ಮತ್ತು ಕಣವನ್ನು, ಪುರುಷ ಕಲಾವಿದರಿಗೆ ಪಂಚೆ ಮತ್ತು ಟವೆಲ್‍ಗಳನ್ನು ನೀಡಲಾಗುತ್ತಿದೆ. ಜಾನಪದ ಕಲಾಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಕಲಾವಿದರು ತಮ್ಮ ಆಧಾರ್‍ಕಾರ್ಡ್ ಜೊತೆಗೆ ತಮ್ಮ ಜಿಲ್ಲೆಯಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಭಾಗವಹಿಸುವಿಕೆಯ ಪತ್ರವನ್ನು ಕಡ್ಡಾಯವಾಗಿ ತರತಕ್ಕದ್ದು ಮತ್ತು ಪತ್ರ ತಂದ ಕಲಾವಿದರಿಗೆ ಮಾತ್ರ ಶ್ರೀಕ್ಷೇತ್ರಕ್ಕೆ ಬಂದು-ಹೋಗುವ ಪ್ರಯಾಣ ಭತ್ಯೆ ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ 9448124141 ಅಥವಾ 9845565696 ಸಂಪರ್ಕಿಸುವಂತೆ ಶ್ರೀಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮನವಿ ಮಾಡಿದ್ದಾರೆ.