ಬೆಂಗಳೂರು,ಜು.16- ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಕಾರಣ, ಸರ್ಕಾರಿ ಕಚೇರಿಗಳಲ್ಲಿ ಫೋಟೋ ಹಾಗೂ ಚಿತ್ರೀಕರಣಕ್ಕೆ ನಿಷೇಧ ಮಾಡುವ ವಿವಾದಾತ್ಮಕ ಸುತ್ತೋಲೆಯನ್ನು ತಡರಾತ್ರಿ ರಾಜ್ಯ ಸರ್ಕಾರ ಹಿಂಪಡೆದಿದೆ.
ಈ ಮೂಲಕ ಆದೇಶ ಹೊರಡಿಸಿದ ಒಂದೇ ದಿನದಲ್ಲಿ ಆದೇಶವನ್ನು ವಾಪಸ್ಸು ಪಡೆದಿದ್ದು, ಸರ್ಕಾರದ ತೀವ್ರ ಮುಜುಗರಕ್ಕೆ ಸಿಲುಕುವಂತಾಗಿದೆ. ರಾಜ್ಯದಲ್ಲಿನ ಗ್ರಾಮ ಪಂಚಾಯತ್‍ನಿಂದ ಹಿಡಿದು ರಾಜಧಾನಿ ಹಂತದವರೆಗೂ ಬರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕೆಲಸದ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಯ ಅನುಮತಿಯಿಲ್ಲದೇ ಫೋಟೋ ತಗೆಯುವಂತಿಲ್ಲ ಮತ್ತು ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ ಎಂದು ಡಿಪಿಎಆರ್ ಇಲಾಖೆ ಹೊರಡಿಸಿದ್ದ ಆದೇಶವನ್ನು ಒಂದೇ ದಿನದಲ್ಲಿ ವಾಪಸ್ ಪಡೆದಿದೆ.
ನೌಕರರ ಹಿತಕ್ಕಾಗಿ ಅಧಿಕೃತ ಆದೇಶ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಬ್ಯಾನ್ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಭ್ರಷ್ಟಾಚಾರಿ ವಿರೋಧಿ ಹೋರಾಟಗಾರರಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಸರ್ಕಾರದ ಈ ನಡೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಆರ್ ಎಸ್ ಪಕ್ಷ, ಆಮ್ ಆದ್ಮಿ ಪಕ್ಷ ಸೇರಿದಂತೆ ಸಾಮಾಜಿಕ ಹೋರಾಟಗಾರರಿಂದಲೂ ಭಾರೀ ವಿರೋಧ ವ್ಯಕ್ತವಾಗಿತ್ತು.
ಫೋಟೋ/ವಿಡಿಯೋ ಚಿತ್ರೀಕರಣ ನಿಷೇಧ ಆದೇಶದ ಕುರಿತು ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಖಂಡನೆ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ಈ ಆದೇಶ ಹೊರಡಿಸಿದೆ. ಇದು ಶೇ.40ರಷ್ಟು ಕಮಿಷನ್ ಸರ್ಕಾರ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಕ್ರಮವನ್ನು ಟೀಕಿಸಿದ್ದರು.
ಇದನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಸರ್ಕಾರಕ್ಕೆ ಈ ಆದೇಶದಿಂದ ಕೆಟ್ಟ ಹೆಸರು ಬರುತ್ತದೆ ಎನ್ನುವ ಮುನ್ಸೂಚನೆ ನೀಡಿರುವುದರಿಂದ ಡಿಪಿಎಆರ್ ತನ್ನ ಆದೇಶವನ್ನ ಹಿಂತೆಗೆದುಕೊಂಡಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮತ್ತು ಪದಾಕಾರಿಗಳು ಕಳೆದ ಫೆಬ್ರವರಿಯಲ್ಲಿ ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳ ಫೋಟೋ ಮತ್ತು ವಿಡಿಯೋ ಮಾಡುವುದನ್ನು ನಿರ್ಬಂಧಿಸಬೇಕೆಂದು ಕೋರಿದ್ದರು. ಮನವಿಯಲ್ಲಿ ಎಲ್ಲ ಜಿಲ್ಲೆ, ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಕೆಲವರು ಕಚೇರಿಯ ಫೋಟೋ/ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಇಲಾಖೆಯ ಘನತೆಗೆ ಕುಂದುಂಟಾಗುತ್ತಿದೆ.
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ವಿಡಿಯೋ ಮಾಡದಂತೆ ಮತ್ತು ಫೋಟೊ ಕ್ಲಿಕ್ಕಿಸದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕ ನಿರ್ಧಾರಕ್ಕೆ ಸಾರ್ವಜನಿಕರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರ ವಿಡಿಯೋ, ಫೋಟೋ ನಿರ್ಬಂಸುವ ಮೂಲಕ ಸರ್ಕಾರಿ ಇಲಾಖಾ ಕಚೇರಿಗಳಲ್ಲಿನ ಅನೈತಿಕ ವ್ಯವಹಾರಗಳನ್ನು ಫೋಷಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು.
ನ್ಯಾಯಯುತವಾಗಿ ಜೀವನ ನಡೆಸುವವರು ಭಯಪಡುವ ಸುತ್ತೋಲೆ ಇದಾಗಿದೆ. ಇದು ಸಾರ್ವಜನಿಕರ ಹಕ್ಕು ಕಸಿದುಕೊಂಡ ಸುತ್ತೋಲೆ ಆಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಭದ್ರತಾ ಕೊಠಡಿಯಾದ ಸರ್ಕಾರಿ ಇಲಾಖೆ ಕಚೇರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಮಾಣಿಕ, ದಕ್ಷತೆಯಿಂದ ಸೇವೆ ನೀಡುವುದು ಸರ್ಕಾರಗಳ ಕರ್ತವ್ಯವಾಗಿದೆ. ಆದರೆ ಪ್ರಸ್ತುತದ ವಿಡಿಯೋ, ಫೋಟೋ ನಿರ್ಬಂಧ ಆದೇಶ ಗಮನಿಸಿದರೆ ಸೇವಾ ಕೇಂದ್ರಗಳು, ಸರ್ಕಾರದ ಕಾರ್ಯಾಲಗಳು ಇನ್ನು ಮುಂದೆ ಭದ್ರಾತಾ ಕೊಠಡಿಯನ್ನಾಗಿ ಮಾಡಿದಂತಿದೆ. ಯಾವ ಅವ್ಯವಹಾರಗಳು ನಡೆದರೂ, ಜನಸಾಮಾನ್ಯರಿಗೆ ತೊಂದರೆಯಾದರೂ ಅದನ್ನು ಕೇಳುವ ಹಕ್ಕು ಕಸಿದುಕೊಂಡಂತಾಗಿರುವ ಈ ಆದೇಶಕ್ಕೆ ಧಿಕ್ಕಾರವಿದೆ ಎಂದು ಕೆಲವರು ತಿಳಿಸಿದ್ದರು.
ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರ, ಹೊರಡಿಸುತ್ತಿರುವ ಆದೇಶಗಳನ್ನು ನೋಡಿದ ಸಾರ್ವಜನಿಕ ಧ್ವನಿಗೆ ಬೀಗ ಹಾಕಿದಂತಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳನ್ನೂ ಸರ್ಕಾರದವರೆ ನಿಯಂತ್ರಿಸುತ್ತಾರೆ. ಅದಾದ ನಂತರ ಸರ್ಕಾರ ಮಾಧ್ಯಮಗಳ ಮೇಲೂ ನಿರ್ಬಂಧ ವಿಧಿಸಿ ನಿಯಂತ್ರಣಕ್ಕೆ ತಂದು ಮಾಧ್ಯಮಗಳ ಹಕ್ಕನ್ನು ಕಸಿಕೊಳ್ಳುತ್ತಾರೆ ಎಂದು ಇದೊಂದು ಸರ್ವಾಧಿಕಾರಿ ಆಡಳಿತ ಸುತ್ತೋಲೆ ಆಗಿದೆ ಎಂದು ಲೇವಡಿ ಮಾಡಲಾಗಿತ್ತು.
ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ, ಲಂಚ ಸ್ವೀಕಾರ ಹೊಸತೇನಲ್ಲ. ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದರು. ಇಂತಹ ವಿಧವಿಧದ ಭ್ರಷ್ಟಾಚಾರ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಹೀಗಾಗಿ ರಾಜ್ಯ ಸರ್ಕಾರ ಕಚೇರಿಗಳಲ್ಲಿ ವಿಡಿಯೋ ಮಾಡುವುದು, ಫೋಟೊ ತೆಗೆಯುವುದನ್ನು ನಿಷೇಧ ಮಾಡಿದೆಯೆ ಎಂಬ ಕುತೂಹಲ ಮೂಡಿದೆ. ಜತೆಗೆ ಆಕ್ರೋಶಕ್ಕೂ ಗುರಿಯಾಗಿದೆ ಎಂದು ಆದೇಶ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಕಾಮೆಂಟು ಮಾಡಿದ್ದರು.