ಬಾಳೆದಿಂದ ಬಟ್ಟೆ, ಔಷಧಿ ತಯಾರು ಯೋಜನೆ

ಕೊಯಂಬತ್ತೂರು, ಜ.25- ಬಾಳೆನಾರು ಮತ್ತು ಕಾಂಡದಿಂದ ಜವಳಿ ಮತ್ತು ಔಷಧಿ ತಯಾರಿಸುವ 400 ಕೋಟಿ ರೂ.ಗಳ ಸಂಶೋಧನಾ ಯೋಜನೆಯನ್ನು ತಮಿಳುನಾಡು ಸರ್ಕಾರ ಖಾಸಗಿ ಸಂಸ್ಥೆಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ. ಇಲ್ಲಿನ ಮೆಟ್ಟುಪಾಳ್ಯಂನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಈ ವಿಷಯ ಪ್ರಕಟಿಸಿದರು. ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಬಾಳೆ ತೋಟಗಾರಿಕೆ ಹೆಚ್ಚಾಗಿರುವುದರಿಂದ ಕೃಷಿಕರಿಗೆ ಎರಡು ರೀತಿ ಅನುಕೂಲ ಕಲ್ಪಿಸುವ ಉದ್ದೇಶ ನಮ್ಮ ಸರ್ಕಾರದ್ದಾಗಿದೆ.

ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆ ಇದಾಗಿದ್ದು, ಬಾಳೆ ಬೆಳೆ ಕಟಾವು ನಂತರ ಅದರ ಕಾಂಡ ಮತ್ತು ಒಣಗಿದ ಎಲೆಗಳಿಂದ ನಾರು ತಯಾರು ಮಾಡಬಹುದಾಗಿದೆ. ಬಾಳೆಯ ಕಾಂಡದಿಂದ ನಾರು ತಯಾರು ಮಾಡಿ ರಾಸಾಯನಿಕ ಮುಕ್ತ ಧೋತಿ ಮತ್ತು ಶರ್ಟುಗಳನ್ನು ತಯಾರು ಮಾಡಬಹುದು. ಗಿಡದ ಕಾಂಡ ಔಷಧಿ ಗುಣಗಳನ್ನು ಹೊಂದಿರುವುದರಿಂದ, ಕಾಂಡದಿಂದ ಔಷಧಿ ತಯಾರಿಕೆ ಯೋಜನೆಯನ್ನೂ ಸರ್ಕಾರ ಹಾಕಿಕೊಂಡಿದೆ.

ಈ ಬಗ್ಗೆ ಇಸ್ರೋ ನಿರ್ದೇಶಕ ಅನಂದ ದೊರೈ ಅವರು ಈಗಾಗಲೇ ವಿವರವಾದ ವರದಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಒಮ್ಮೆ ಈ ಯೋಜನೆ ಯಶಸ್ವಿಯಾದರೆ, ಬಾಳೆ ಬೆಳೆಗಾರರ ಆದಾಯ ದ್ವಿಗುಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲಿದೆ ಎಂದು ಸಿಎಂ ವಿವರಿಸಿದ್ದಾರೆ.