ಕಂಚಗಲ್ಲು ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ

Social Share

ಮಾಗಡಿ,ಅ.24- ಕಂಚಗಲ್ಲು ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಅವರು ತಡರಾತ್ರಿ ಮಠದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನಲ್ಲಿರುವ ಬಂಡೆಮಠದಲ್ಲೇ ಕಿಟಕಿ ಕಂಬಿಗೆ ನೇಣು ಬಿಗಿದುಕೊಂಡು ಬಸವಲಿಂಗ ಸ್ವಾಮೀಜಿ (44)ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ಭಕ್ತರೊಂದಿಗೆ ಕುಳಿತು ಕೆಲ ಕಾಲ ಮಾತನಾಡಿ ನಂತರ ಊಟ ಮಾಡಿ ಮಲಗಲು ತಮ್ಮ ಕೊಠಡಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಸ್ವಾಮೀಜಿ ಎಷ್ಟು ಹೊತ್ತಾದರೂ ಹೊರಗೆ ಬಾರದಿರುವುದನ್ನು ಗಮನಿಸಿದ ಮಠದ ಭಕ್ತರೊಬ್ಬರು ಅವರ ಕೊಠಡಿ ಬಳಿ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಕೊಯಮತ್ತೂರಿನ ದೇವಸ್ಥಾನದ ಬಳಿ ಕಾರ್ ಸ್ಫೋಟ, ಉಗ್ರರ ಕೈವಾಡದ ಶಂಕೆ

ತಕ್ಷಣ ಮಠದಲ್ಲಿದ್ದವರಿಗೆ ವಿಷಯ ಹೇಳಿ ಕುದೂರು ಪೊಲೀಸರಿಗೆ ತಿಳಿಸಿದ್ದಾರೆ. ಮಠಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಡೆತ್‍ನೋಟ್ ಪತ್ತೆಯಾಗಿದೆ. ಡೆತ್‍ನೋಟನ್ನು ವಶಕ್ಕೆ ಪಡೆದ ಪೊಲೀಸರು ಮಠದವರಿಂದ ಮಾಹಿತಿ ಪಡೆದುಕೊಂಡು ಮೃತ ದೇಹವನ್ನು ನೆಲಮಂಗಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ಮೃತದೇಹವನ್ನು ಮಠಕ್ಕೆ ಹಸ್ತಾಂತರಿಸಲಾಗಿದೆ. ಸ್ವಾಮೀಜಿ ಅವರ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದೆ. ಮಠದ ಆವರಣದಲ್ಲಿ ಮಧ್ಯಾಹ್ನದವರೆಗು ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮಠದ ಬಳಿ ಭಕ್ತರ ದಂಡು: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಭಕ್ತರ ದಂಡೇ ಮಠದ ಬಳಿ ಜಮಾಯಿಸಿತ್ತು.

ಅಂತ್ಯಕ್ರಿಯೆ: ಇಂದು ಮಧ್ಯಾಹ್ನ 3.30ರ ಸುಮಾರಿಗೆ ಲಿಂಗಾಯತ ಸಂಪ್ರದಾಯದಂತೆ ಮಠದ ಆವರಣದಲ್ಲಿ ಸ್ವಾಮೀಜಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಮಠದವರು ತಿಳಿಸಿದ್ದಾರೆ. ಸ್ವಾಮೀಜಿ ಅವರು ಅಪಾರ ಭಕ್ತಾಗಳನ್ನು ಹೊಂದಿದ್ದು, ಉತ್ತಮ ಹೆಸರುಗಳಿಸಿದ್ದರು. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಮಠದ ರಜತ ಮಹೋತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದರು.

ಮಠಗಳ ಸ್ವಾಮೀಜಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸರಣಿ ಮುಂದುವರೆದಿದ್ದು, ಕಳೆದ 6 ತಿಂಗಳ ಹಿಂದಷ್ಟೇ ಸೋಲೂರು ಹೋಬಳಿ ಚಿಲುಮೆ ಮಠದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಷಯ ಕೋರಿದ ಸಿಎಂ

ಕಳೆದ ತಿಂಗಳ ಹಿಂದೆ ಉತ್ತರ ಕರ್ನಾಟಕ ಭಾಗದ ಮಡಿವಾಳೇಶ್ವರ ಮಠದ ಸ್ವಾಮೀಜಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮಾಸುವ ಮುನ್ನವೇ ಕಂಚಗಲ್ಲು ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವುದು ಭಕ್ತಾಗಳಲ್ಲಿ ಆತಂಕವುಂಟು ಮಾಡಿದೆ.

Articles You Might Like

Share This Article