ಬೆಂಗಳೂರು, ಫೆ.15- ರಾಜ್ಯದ ಬಿಜೆಪಿ ಸರ್ಕಾರದ ಆಡಳಿತಾವಯಲ್ಲಿ ರೈತ ಸಮುದಾಯಕ್ಕೆ ಯಾವುದೇ ಅನುಕೂಲ ಆಗಿಲ್ಲ. ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ ಅವರ ಬೆನ್ನು ಮುರಿದಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ವಿಧಾನಸಭೆಯಲ್ಲಿಂದು ಟೀಕಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಡಬ್ಬಲ್ ಎಂಜಿನ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಇದು ಡಬ್ಬಲ್ ಎಂಜಿನ್ ಸರ್ಕಾರವಲ್ಲ. ನಿಂತಲ್ಲೇ ನಿಂತಿರುವ ಡೀಸೆಲ್ ಇಲ್ಲದ ಸರ್ಕಾರವಾಗಿದೆ ಎಂದು ಮೂದಲಿಸಿದರು.
ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ, ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ರೈತರ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 24 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿತ್ತು.
ಸಹಕಾರಿ ಸಚಿವರು ಪ್ರತಿನಿತ್ಯ ರೈತರಿಗೆ ಸಾಲಸೌಲಭ್ಯ ಕಲ್ಪಿಸಿರುವ ಬಗ್ಗೆ ಹೇಳುತ್ತಲ್ಲೇ ಇದ್ದಾರೆ. ವಾಸ್ತವಿಕವಾಗಿ ನಿಜವಾದ ರೈತರಿಗೆ ಈ ಸೌಲಭ್ಯ ದೊರೆತಿಲ್ಲ ಎಂದು ಆಕ್ಷೇಪಿಸಿದರು.ಈ ಹಂತದಲ್ಲಿ ರೈತರಿಗೆ ಸಾಲ ನೀಡುವ ವಿಚಾರದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಕಾಶೆಂಪೂರ್ ನಡುವೆ ಕೆಲ ಮಾತಿನ ಚಕಮಕಿ ನಡೆಯಿತು.
ಮತ್ತೆ ಮಾತು ಮುಂದುವರೆಸಿದ ಬಂಡೆಪ್ಪ ಅವರು, ರಾಜ್ಯಪಾಲರ ಭಾಷಣ ಕುರಿತು ಮಾತನಾಡಿದ ಆಡಳಿತಪಕ್ಷದ ಶಾಸಕ ಸಿ.ಟಿ.ರವಿ ಅವರು, ಅಧಿಕಾರದ ಮದದಿಂದ ಸಮ್ಮಿಶ್ರ ಸರ್ಕಾರದ ರಚನೆ ಕುರಿತು ವ್ಯಂಗ್ಯವಾಡಿದ್ದಾರೆ. ಮಾತಿನ ಭರಾಟೆಯಲ್ಲಿ ವಿಕಲಾಂಗ ಮಗುವಿಗೆ ಹೋಲಿಕೆ ಮಾಡಿದ್ದಾರೆ. ಆದರೆ, ನಾವ್ಯಾರು ಇನ್ನೊಬ್ಬರ ಮನೆ ಬಾಗಿಲಿಗೆ ಅಧಿಕಾರಕ್ಕಾಗಿ ಹೋಗಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂತಹ ಕೆಲಸ ಮಾಡಿಲ್ಲ.
ಬಿಜೆಪಿ ರಾಜ್ಯದಲ್ಲಿ ಹೇಗೆ ಬೆಳೆಯಿತು? ಎಷ್ಟು ಬಾರಿ ಆಪರೇಷನ್ ಮಾಡಿತ್ತು ಎಂಬ ವಿಚಾರಗಳು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಚುನಾವಣೆ ಪ್ರಣಾಳಿಕೆಯಲ್ಲಿನ ಯಾವುದೇ ಭರವಸೆ ಈಡೇರಿಸಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಹೇಳಿರುವಂತೆ ಅಭಿವೃದ್ಧಿಯಾಗಿಲ್ಲ ಎಂದು ಟೀಕಿಸಿದರು.
#BandeppaKashyampur, #Session, #BJPGovt,