ಬೆಂಗಳೂರು,ಫೆ.7- ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳು ಮೃತ್ಯು ಕೂಪಗಳಾಗಿರುವ ಆತಂಕಕಾರಿ ಅಂಶ ಹೊರಬಿದ್ದಿದ್ದು, ಕಳೆದ ಎರಡು ವರ್ಷಗಳಿಂದ ರಸ್ತೆಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪುತ್ತಿರುವವರ ಸಂಖ್ಯೆ ದ್ವಿಗುಣವಾಗಿದೆ. ರಸ್ತೆ ಗುಂಡಿಗಳಿಂದ ಏಳು ಮಂದಿ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. 2020ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ರಸ್ತೆ ಗುಂಡಿಗೆ ಬಲಿಯಾದವರ ಸಂಖ್ಯೆ ದ್ವಿಗುಣವಾಗಿದೆ. ಒಟ್ಟು ಹತ್ತು ಸವಾರರು ಪ್ರಾಣ ಕಳೆದುಕೊಂಡಿದ್ದಾರೆ.
ಪೂರ್ವ ವಲಯದಲ್ಲಿ -3078, ಪಶ್ಚಿಮ ವಲಯದಲ್ಲಿ-2295, ದಕ್ಷಿಣ ವಲಯದಲ್ಲಿ 931, ಬೊಮ್ಮನಹಳ್ಳಿ ವಲಯದಲ್ಲಿ -1025, ದಾಸರಹಳ್ಳಿ ವಲಯದಲ್ಲಿ 576 ಹಾಗೂ ಮಹಾದೇವಪುರ ವಲಯದಲ್ಲಿ 625 ರಸ್ತೆಗುಂಡಿಗಳಿವೆ. ಆರ್‍ಆರ್‍ನಗರ ವಲಯದಲ್ಲಿ 2,792, ಯಲಹಂಕ ವಲಯದಲ್ಲಿ 363 ಸೇರಿದಂತೆ ಒಟ್ಟು 11,685 ಗುಂಡಿ ಬಿದ್ದ ರಸ್ತೆಗಳಿವೆ.
ಈ ಪೈಕಿ 9,927 ಗುಂಡಿ ಬಿದ್ದ ರಸ್ತೆಗಳ ಮೇಲೆ ಬಿಬಿಎಂಪಿ ಕ್ರಮ ಕೈಗೊಂಡಿದೆ. ಉಳಿದ 1,758 ರಸ್ತೆಗಳಲ್ಲಿ ಗುಂಡಿಗಳನ್ನ ಮುಚ್ಚುವ ಅಗತ್ಯವಿದೆ.
ಮತ್ತೊಂದೆಡೆ ಈ ಬಗ್ಗೆ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆದಿದ್ದು, ಗುಂಡಿ ಮುಚ್ಚಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವಿವರ ನೀಡುವಂತೆ ಬಿಬಿಎಂಪಿಗೆ ಖಡಕ್ ಸೂಚನೆ ನೀಡಿತ್ತು.
ಬೆಂಗಳೂರಿನಲ್ಲಿರುವ ಗುಂಡಿಗಳನ್ನು ಮುಚ್ಚಲು ಏನು ಕ್ರಮ ತೆಗೆದುಕೊಂಡಿದ್ದೀರಿ? ಇದಕ್ಕೆ ಶಾಶ್ವತ ಪರಿಹಾರವಾಗಿ ಉತ್ತಮ ತಂತ್ರಜ್ಞಾನ ಬಳಕೆ ಮಾಡಬಹುದಲ್ಲವೇ ಎಂದು ಹೈಕೋರ್ಟ್ ಪ್ರಶ್ನಿಸಿತ್ತು. ಆದರೆ ಈ ಪ್ರಶ್ನೆಗೆ ಬಿಬಿಎಂಪಿ ಸಮರ್ಪಕ ಉತ್ತರವನ್ನೇ ನೀಡಿಲ್ಲ ಎನ್ನಲಾಗಿದೆ.
ಒಟ್ಟಾರೆ ರಸ್ತೆ ಗುಂಡಿಗಳಿಂದ ಸಾವುನೋವುಗಳಾಗುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಾವಿನ ಸಂಖ್ಯೆ ದುಪ್ಪಟ್ಟಾಗುವುದರ ಜೊತೆಗೆ ಅಪಘಾತದಲ್ಲಿ ಅಂಗಹೂನವಾಗುತ್ತಿರುವವರು ಕೂಡ ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಎಚ್ಚೆತ್ತು ಸಾರ್ವಜನಿಕರ ಹಾಗೂ ನ್ಯಾಯಾಲಯದ ಅವಕೃಪೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬೇಕಿದೆ.
