ಬೆಂಗಳೂರು, ಜ.12- ಇಡೀ ದೇಶದಲ್ಲೇ ಬೆಂಗಳೂರು ಕೊರೊನಾ ಹಾಟ್‍ಸ್ಪಾಟ್ ಸಿಟಿಯಾಗಿ ಪರಿವರ್ತನೆಯಾಗಿದೆ. ದಿನೇ ದಿನೇ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳನ್ನು ಗಮನಿಸಿದರೆ ಇಲ್ಲಿ ಜನ ವಾಸ ಮಾಡಲು ಸಾಧ್ಯವೆ ಎಂಬ ಅನುಮಾನ ಕಾಡತೊಡಗಿದೆ. ಇಂದು ಒಂದೇ ದಿನ ಬರೋಬ್ಬರಿ 15,617 ಮಂದಿಗೆ ಕೊರೊನಾ ಮಹಾಮಾರಿ ಒಕ್ಕರಿಸಿದೆ.
ಇದರಿಂದ ಗಲ್ಲಿ ಗಲ್ಲಿಗಳಲ್ಲಿಯೂ ಸೋಂಕು ಕಂಡು ಬರುತ್ತಿದೆ. ನಿನ್ನೆ 10,800 ಮಂದಿಗೆ ಸೋಂಕು ತಗುಲಿತ್ತು. ಇಂದು 15,617 ಮಂದಿಗೆ ಸೋಂಕು ತಗುಲಿರುವ ಸಾಧ್ಯತೆ ಇರುವುದರಿಂದ ಒಂದೇ ದಿನದಲ್ಲಿ 4817 ಹೆಚ್ಚಿನ ಪ್ರಕರಣ ದಾಖಲಾಗಿರುವುದು ದಿಗಿಲು ಹುಟ್ಟಿಸುತ್ತಿದೆ. ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವುದರಿಂದ ನಗರದಲ್ಲಿ ಕೊರೊನಾ ಪಾಸಿಟಿವಿಟಿ ದರವೂ ಶೇ.15ರ ಗಡಿ ದಾಟಿದೆ.
ಪಾಸಿಟಿವಿಟಿ ದರ ಶೇ.5ರ ಗಡಿ ದಾಟಿದರೆ ಅಪಾಯ ಎಂಬ ತಜ್ಞರು ಎಚ್ಚರಿಸಿದ್ದಾರೆ. ಆದರೆ, ನಗರದಲ್ಲಿ ಪಾಸಿಟಿವಿಟಿ ರೇಟ್ ಶೇ.15ರ ಗಡಿ ದಾಟಿರುವುದರಿಂದ ಇಲ್ಲಿನ ಪರಿಸ್ಥಿತಿ ಭಯಾನಕವಾಗತೊಡಗಿದೆ. ಇಡಿ ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿರುವುದರಿಂದ ಇಲ್ಲಿನ ಜನ ಸಾಕಷ್ಟು ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ.
ಈಗಾಗಲೆ ಬಹುತೇಕ ಮಂದಿ ಎರಡು ಡೋಸ್ ಲಸಿಕೆ ಪಡೆದಿರುವುದರಿಂದ ಅವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿದೆ ಇದು ಸೋಂಕು ಕಾಣಿಸಿಕೊಂಡವರಿಗೆ ವರದಾನವಾಗಿ ಪರಿಣಮಿಸಿದೆ. ಸೋಂಕು ಕಾಣಿಸಿಕೊಂಡ ಶೇ.93 ರಷ್ಟು ಮಂದಿ ಮನೆಯಲ್ಲೆ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುವುದರಲ್ಲಿ ಲಸಿಕೆ ಪಾತ್ರ ಮುಖ್ಯವಾಗಿದೆ.
ಅಂಕಿ-ಅಂಶ ನೋಡೋದಾದರೆ, ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ-74,000, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಕೇವಲ 3761, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 425 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, ಹೋಮ್ ಕ್ವಾರಂಟೈನ್‍ನಲ್ಲಿ 57 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲೂ ಆಸ್ಪತ್ರೆಗೆ ದಾಖಲಾಗಿರುವ 3761 ಮಂದಿಯಲ್ಲಿ 3511 ಮಂದಿ ಸಾಮಾನ್ಯ ಹಾಸಿಗೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಐಸಿಯುವಿನಲ್ಲಿ 178, ವೆಂಟಿಲೇಟರ್‍ನಲ್ಲಿ 19 ಹಾಗೂ ಆಕ್ಸಿಜನ್ ಹಾಸಿಗೆಗಳಲ್ಲಿ 178 ಮಂದಿ ಇದ್ದಾರೆ.
