ಬೆಂಗಳೂರು ಸೇಫ್ ಸಿಟಿ : ಕಮಲ್ ಪಂಥ್

Social Share

ಬೆಂಗಳೂರು,ಜ.7- ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ಉದ್ಯಾನನಗರಿ ಬೆಂಗಳೂರನ್ನು ಸೇಫ್ ಸಿಟಿಯನ್ನಾಗಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ. ಅಪರಾಧ ಪ್ರಕರಣಗಳು ಹಾಗೂ ಪತ್ತೆಯಾಗಿರುವ ಕಳವು ಪ್ರಕರಣಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಪರಾಧ ಪ್ರಕರಣಗಳ ನಿಯಂತ್ರಣದ ಬಗ್ಗೆ ವಿವರಣೆ ನೀಡಿದರು.
ಸರಗಳ್ಳತನ, ಡಕಾಯಿತಿ, ಕೊಲೆ, ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲಾಗಿದೆ. ಈ ಹಿಂದೆ ರೌಡಿಗಳು ಆಯಾ ಪ್ರದೇಶದ ಚೌಕಟ್ಟನ್ನು ವಿಧಿಸಿಕೊಂಡು ಪಾರುಪತ್ಯ ಸಾಧಿಸುತ್ತಿದ್ದರು. ಮಚ್ಚು , ಲಾಂಗ್ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದ ಪ್ರಸಂಗಗಳು ವರದಿಯಾಗಿದ್ದವು. ಸರಗಳ್ಳತನ, ದರೋಡೆ ಪ್ರಕರಣಗಳು ಹೆಚ್ಚಿದ್ದವು.
ಪೊಲೀಸರು ಬಿಗಿ ಕ್ರಮ ಕೈಗೊಳ್ಳುವ ಮೂಲಕ ಎಲ್ಲದಕ್ಕೂ ಕಡಿವಾಣ ಹಾಕಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಅಪರಾಧದ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ನಗರದ ಜನರಲ್ಲಿ ಸುರಕ್ಷತೆಯ ಭಾವನೆಯಿದೆ ಎಂದು ಆಯುಕ್ತರು ಹೇಳಿದರು. ರೌಡಿ ಚಟುವಟಿಕೆಗಳನ್ನು ನಡೆಸುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಕೆಲವರು ಜೈಲಿನಲ್ಲಿದ್ದುಕೊಂಡೇ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಅಂಥವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಜೈಲಿನಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದ ಸಹಚರರ ಮೇಲೂ ನಿಗಾ ಇಟ್ಟು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಕಾನೂನು ಬಾಹಿರ ಚಟುವಟಿಕೆಗಳು ತಗ್ಗಿವೆ ಎಂದರು. 2020ರ ಜುಲೈ ನಂತರ ಮಾದಕ ವಸ್ತುಗಳ ವಿರುದ್ಧ ಸಮರವನ್ನೇ ಸಾರಲಾಗಿತ್ತು. ಹಲವಾರು ಮಂದಿ ಡ್ರಗ್ ಪೆಡ್ಲರ್‍ಗಳನ್ನು ಬಂಸಲಾಗಿದೆ. ಮಾದಕವಸ್ತು ಜಾಲದಲ್ಲಿದ್ದ ಸೆಲೆಬ್ರಿಟಿಗಳನ್ನು ಕೂಡ ಬಂಸಿದ್ದೇವೆ.
ತಲೆಗೂದಲ ಪರೀಕ್ಷೆಗೊಳಪಡಿಸುವ ಮೂಲಕ ಮಾದಕವಸ್ತು ಸೇವನೆಯನ್ನು ಖಚಿತಪಡಿಸಿಕೊಳ್ಳುವ ಪದ್ದತಿಯನ್ನು ಮೊದಲ ಬಾರಿಗೆ ನಾವು ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ. ಮಾದಕವಸ್ತು ಸಾಗಾಣಿಕೆಯ ಜಾಲಗಳಿಗೆ ಕಡಿವಾಣ ಹಾಕಲಾಗಿದೆ. ದೊಡ್ಡ ಪ್ರಮಾಣದ ಸಾಗಾಣಿಕೆ ಈಗ ನಿಯಂತ್ರಣದಲ್ಲಿದೆ. ಸಣ್ಣ ಪ್ರಮಾಣದ ವಹಿವಾಟು ನಡೆಯುತ್ತಿದ್ದು, ಅದರ ಮೇಲೂ ನಿಗಾವಹಿಸಿದ್ದೇವೆ ಎಂದರು.
2021ರಲ್ಲಿ 3700 ಕೆಜಿಗೂ ಹೆಚ್ಚಿನ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದೇವೆ. ಅದರಲ್ಲಿ ಹಲವಾರು ರೀತಿಯ ಸಿಂಥೆಟಿಕ್ ಡ್ರಗ್‍ಗಳು ಸೇರಿವೆ. ಗಾಂಜಾ ಹಾವಳಿಯಿಂದ ಬಡಜನರ ಬದುಕು ಹಾಳಾಗುತ್ತಿತ್ತು. ಸಿಂಥೆಟಿಕ್ ಡ್ರಗ್‍ನಿಂದ ವಿದ್ಯಾರ್ಥಿಗಳು, ಶ್ರೀಮಂತ ಮನೆತನದವರು ಬದುಕು ಕಳೆದುಕೊಳ್ಳುತ್ತಿದ್ದರು ಎಂದು ಹೇಳಿದರು.
2019ರಲ್ಲಿ 150 ಎಲ್‍ಎಸ್‍ಡಿ ಸಿಂಥೆಟಿಕ್ ಡ್ರಗ್‍ನ್ನು ವಶಪಡಿಸಿಕೊಳ್ಳಲಾಗಿತ್ತು. ಕಳೆದ ವರ್ಷ 12 ಸಾವಿರ ಎಲ್‍ಎಸ್‍ಡಿಗಳನ್ನು ಜಪ್ತಿ ಮಾಡಲಾಗಿದೆ. 19 ಕೆಜಿ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.

Articles You Might Like

Share This Article