ಬೆಂಗಳೂರು, ಫೆ.11- ಕೋರ್ಟ್ ಏನೇ ಛೀಮಾರಿ ಹಾಕಿದರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದೇ ಇಲ್ಲ ಎಂಬುದಕ್ಕೆ ಇಲ್ಲಿದೆ ಸಾಕ್ಷಿ.
ವಾಹನ ಸವಾರರಿಗೆ ಮೃತ್ಯುಕೂಪವಾಗಿರುವ ರಸ್ತೆಗುಂಡಿಗಳಿಗೆ ಮುಕ್ತಿ ಹಾಡದಿದ್ದರೆ ಜೈಲಿಗಟ್ಟಬೇಕಾಗುತ್ತದೆ ಎಂದು ನ್ಯಾಯಾಲಯ ಗಂಭೀರ ಎಚ್ಚರಿಕೆ ನೀಡಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ತಮ್ಮ ಎಂದಿನ ಉದಾಸೀನ ಧೋರಣೆಯನ್ನು ಮುಂದು ವರೆಸಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಡಬಲ್‍ರೋಡ್ ಮೇಲ್ಸೇತುವೆ ಮೇಲೆ ಡೆಡ್ಲಿ ಗುಂಡಿ ಗಳಿದ್ದರೂ ಅವುಗಳನ್ನು ಮುಚ್ಚುವ ಗೋಜಿಗೆ ಹೋಗಿಲ್ಲ.
ಡಬಲ್‍ರೋಡ್ ಮೇಲ್ಸೇತುವೆ ಮೇಲೆ ಇರುವ ಗುಂಡಿಗಳು ಮೂರಡಿ ಉದ್ದ ಇದ್ದು, ಈ ಗುಂಡಿಗಳ ಮೇಲೆ ವಾಹನ ಹರಿದರೆ ಸವಾರ ಯಮಲೋಕ ಸೇರುವುದು ಗ್ಯಾರಂಟಿ. ಫ್ಲೈಓವರ್ ಹತ್ತುತ್ತಿದ್ದಂತೆ ಮೇಲ್ಸೇತುವೆ ಮೇಲಿರುವ ಡೆಡ್ಲಿ ಗುಂಡಿಗಳ ದರ್ಶನವಾಗುತ್ತವೆ. ಮೇಲ್ಸೇತುವೆಯ ಎರಡು ಮೂರು ಕಡೆ ಡೆಡ್ಲಿ ಗುಂಡಿಗಳಿದ್ದರೂ ಇದುವರೆಗೂ ಗುಂಡಿ ಮುಚ್ಚಲು ಮಾತ್ರ ಬಿಬಿಎಂಪಿ ಅಧಿಕಾರಿಗಳು ಮನಸು ಮಾಡಿಲ್ಲ. ಮೇಲ್ಸೇತುವೆ ಮೇಲೆ ಬೀಳುವ ಮಳೆ ನೀರು ಸರಾಗವಾಗಿ ಹರಿದುಹೋಗಲಿ ಎಂಬ ಉದ್ದೇಶದಿಂದ ಗುಂಡಿಗಳನ್ನು ಮಾಡಲಾಗಿದೆ.
ಗುಂಡಿಗಳ ಮೇಲೆ ವಾಹನಗಳು ಹಾದು ಹೋದರೂ ಯಾವುದೆ ಅಪಾಯವಾಗದಂತೆ ಹೋಲ್ ಮೇಲೆ ಗ್ರಿಲ್‍ಗಳನ್ನು ಅಳವಡಿಸಬೇಕು. ಆದರೆ, ಡಬಲ್‍ರೋಡ್ ಮೇಲ್ಸೇತುವೆ ಮೇಲಿರುವ ಗುಂಡಿಗಳನ್ನು ಹಾಗೆ ಬಿಡಲಾಗಿದೆ.
ಹಗಲು ವೇಳೆ ವಾಹನ ಸವಾರರಿಗೆ ದರ್ಶನ ನೀಡುವ ಈ ಗುಂಡಿಗಳು ರಾತ್ರಿ ವೇಳೆ ವಾಹನ ಸವಾರರಿಗೆ ಕಾಣಿಸುವುದಿಲ್ಲ. ಒಂದು ವೇಳೆ ಡೆಡ್ಲಿ ಗುಂಡಿಗಳ ಮೇಲೆ ದ್ವಿಚಕ್ರ ವಾಹನಗಳು ಹಾದು ಹೋದರೆ ಭಾರಿ ಪ್ರಮಾದವಾಗುವುದು ಗ್ಯಾರಂಟಿ. ಹೀಗಾಗಿ ಕೂಡಲೆ ಸಂಬಂಧಪಟ್ಟ ಅಕಾರಿಗಳು ಯಮಸ್ವರೂಪಿಗಳಾಗಿ ಬಾಯ್ತೆರೆದಿರುವ ಈ ಗುಂಡಿಗಳಿಗೆ ಮುಕ್ತಿ ತೋರಿಸುವರೆ ಕಾದು ನೋಡಬೇಕು.
