ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಸಿ ದೇಶ, ವಿದೇಶಗಳಿಗೆ ಮಾರುತ್ತಿದ್ದ ನೈಜೀರಿಯಾ ಪ್ರಜೆ ಬಂಧನ

Social Share

ಬೆಂಗಳೂರು, ಜ. 11- ನಗರದಲ್ಲೇ ಡ್ರಗ್ಸ್ ತಯಾರಿಸಿ ದೇಶ, ವಿದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ನೈಜೀರಿಯಾ ಪ್ರಜೆಯನ್ನು ಬಂಧಿಸಿ 50 ಲಕ್ಷ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ರಿಚರ್ಡ್ ಬಂಧಿತ ವಿದೇಶಿ ಪ್ರಜೆ. ಈತನ ಅಣ್ಣ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಆರೋಪಿಯಿಂದ 50 ಲಕ್ಷ ರೂ. ಮೌಲ್ಯದ 900 ಗ್ರಾಂ ಕೊಕೈನ್, 50 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಮಾದಕ ವಸ್ತು ತಯಾರಿಸಲು ಬಳಸುತ್ತಿದ್ದ 10 ಲೀಟರ್ ಕುಕ್ಕರ್, 5 ಲೀಟರ್ ಅಳವಡಿಸಿದ್ದ ಪ್ಲಾಸ್ಟಿಕ್ ಪೈಪ್, ತಯಾರಿಸಲು ಬೇಕಾದ 930 ಗ್ರಾಂ ಕಚ್ಚಾ ಪದಾರ್ಥಗಳು, 2 ಮೊಬೈಲ್ ಫೋನ್, 1 ತೂಕದ ಯಂತ್ರ, ಹೋಂಡಾ ಡಿಯೋ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಸರುಘಟ್ಟ ಮುಖ್ಯರಸ್ತೆ ತರಬನಹಳ್ಳಿ ಪ್ರದೇಶದಲ್ಲಿ ವಿದೇಶಿ ಪ್ರಜೆಗಳಿಬ್ಬರು ವಾಸ ಮಾಡಿಕೊಂಡು ಮನೆಯಲ್ಲೇ ಮಾದಕ ವಸ್ತು ಎಂಡಿಎಂಎ ಕ್ರಿಸ್ಟೆಲ್ ಮಾತ್ರೆಗಳನ್ನು ತಯಾರಿಸುತ್ತಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಸಿಸಿಬಿ ಮಾದಕದ್ರವ್ಯ ನಿಗ್ರಹದಳದ ಪೊಲೀಸರು ಮನೆ ಮೇಲೆ ದಾಳಿ ಮಾಡಿ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ.
ಆರೋಪಿ ರಿಚರ್ಡ್ ತನ್ನ ಅಣ್ಣನೊಂದಿಗೆ 2019ರಲ್ಲಿ ಬಿಸಿನೆಸ್ ವೀಸಾದಲ್ಲಿ ದೆಹಲಿಗೆ ಬಂದಿದ್ದಾನೆ. ಆನಂತರ 6 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು. ತದನಂತರ 2 ತಿಂಗಳ ಹಿಂದೆಯಷ್ಟೇ ಸೋಲದೇವನಹಳ್ಳಿ ವ್ಯಾಪ್ತಿಗೆ ತಮ್ಮ ವಾಸ್ತವ್ಯ ಬದಲಿಸಿಕೊಂಡು ವಾಸವಿದ್ದ ಮನೆಯಲ್ಲೇ ಪ್ರೆಷರ್ ಕುಕ್ಕರ್ ಬಳಸಿ ಎಂಡಿಎಂಎ ಮಾತ್ರೆಗಳನ್ನು ತಯಾರಿಸಿ ಬೆಂಗಳೂರು ನಗರ, ದೇಶ ಹಾಗೂ ವಿದೇಶಗಳಲ್ಲಿ ಮಾರಾಟ ಮಾಡುತ್ತಿದ್ದರು.
ಆರೋಪಿ ಅಣ್ಣ ಕೊಕೈನ್‍ನನ್ನು ಬೇರೆಡೆಯಿಂದ ತರಿಸಿಕೊಳ್ಳುತ್ತಿದ್ದನು. ಆರೋಪಿಗಳಿಬ್ಬರು ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರಲ್ಲದೆ ಮುಂಬೈ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿಯೂ ಮಾದಕವಸ್ತು ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ರಿಚರ್ಡ್ ಅಣ್ಣನಿಗಾಗಿ ಸಿಸಿಬಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

Articles You Might Like

Share This Article