ಸಿಲಿಕಾನ್ ಸಿಟಿಯಲ್ಲಿ ಗಣೇಶೋತ್ಸವ ಮೆರವಣಿಗೆ ವ್ಯಾಪಕ ಭದ್ರತೆ

Social Share

ಬೆಂಗಳೂರು,ಸೆ.4- ನಗರದ ಪೂರ್ವ ಹಾಗೂ ಈಶಾನ್ಯ ವಿಭಾಗಗಳಲ್ಲಿ ಇಂದು ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದು, ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿರುವ ಕೆ.ಜಿ.ಹಳ್ಳಿ, ಹೆಣ್ಣೂರು, ರಾಮಮುರ್ತಿನಗರ, ಭಾರತಿನಗರ, ಪುಲಕೇಶಿನಗರ, ಗೋವಿಂದಪುರ ಸೇರಿದಂತೆ ಹಲವು ಭಾಗಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಇಂದು ನೂರಾರು ಸಂಘಟನೆಗಳು ಹಲಸೂರು ಕೆರೆಯಲ್ಲಿ ವಿಸರ್ಜನೆ ಮಾಡಲು ಬೃಹತ್ ಮೆರವಣಿಗೆ ಮಾಡುತ್ತಿವೆ.

ಮೆರವಣಿಗೆ ನಡೆಯುವ ದಾರಿ ಯುದ್ಧಕ್ಕೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಜತೆಗೆ ಪೊಲೀಸರಿಗೂ ಬಾಡಿ ಕ್ಯಾಮೆರಾಗಳನ್ನು ನೀಡಲಾಗಿದೆ. ಮಾರ್ಗದುದ್ದಕ್ಕೂ ಡ್ರೋಣ್ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ.

ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಿಂದೆಂದೂ ಕಾಣದ ಬಿಗಿ ಪೊಲೀಸ್ ಪಹರೆಯನ್ನು ನಿಯೋಜಿಸಲಾಗಿದೆ. ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿದ್ದು, ಯಾವುದೇ ಗಲಾಟೆಗೆ ಆಸ್ಪದ ಕೊಡದೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಸ್ಥಳೀಯರ ಪೊಲೀಸರ ಜತೆಗೆ ಆರ್‍ಐಎಫ್ ತುಕಡಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪೊಲೀಸರು ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಡಿಸಿಪಿ ಭೀಮಾಶಂಕರ್ ಗುಳೆದ್ ಅವರ ನೇತೃತ್ವದಲ್ಲಿ ಪೂರ್ವ ವಿಭಾಗದ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿ ಪುಂಡಾಟಿಕೆಗೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಹಲಸೂರು ಕೆರೆಯ ಅಂಗಳದಲ್ಲಿರುವ ಕಲ್ಯಾಣ ಬಳಿಗೆ ಬರುವ ಗಣೇಶ ಮೂರ್ತಿಗಳನ್ನು ಸರಾಗವಾಗಿ ಒಳಗೆ ತೆಗೆದುಕೊಂಡು ಹೋಗಲು ಮತ್ತು ಸಂಘಟನೆಗಳ ಸದಸ್ಯರಿಗೆ ನಿಯಮ ಪಾಲಿಸಲು ಸೂಚನೆಗಳನ್ನು ನೀಡಿದ್ದಾರೆ. ಅಲ್ಲೂ ಕೂಡ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕಳೆದ ರಾತ್ರಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದ, ಇಂದು ಬೆಳಗ್ಗೆ 500 ಮೂರ್ತಿಗಳನ್ನು ಕ್ರೇನ್ ಮೂಲಕ ಬಿಬಿಎಂಪಿ ಸಿಬ್ಬಂದಿಗಳು ವಿಸರ್ಜನೆ ಮಾಡಿದ್ದಾರೆ.

Articles You Might Like

Share This Article