ಈ ಬಾರಿ ಅದ್ದೂರಿಯಾಗಿ ನೆರವೇರಲಿದೆ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ

Social Share

ಬೆಂಗಳೂರು,ಮಾ.9-ಕೊರೊನಾ ಸೋಂಕು ಕ್ಷೀಣಿಸಿರುವ ಹಿನ್ನಲೆಯಲ್ಲಿ ಈ ಬಾರಿ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖದತ್ತ ಸಾಗಿರುವುದರಿಂದ ಹಬ್ಬ ಹರಿದಿನಗಳು ಸೇರಿದಂತೆ ಎಲ್ಲಾ ವಲಯಗಳಿಗೂ ವಿನಾಯಿತಿ ನೀಡಿರುವುದರಿಂದ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಉತ್ಸವ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬರುವ ಏಪ್ರಿಲ್ 8ರಿಂದ 18ರವರೆಗೆ ಕರಗ ಜಾತ್ರಾ ಮಹೋತ್ಸವ ನಡೆಯಲಿದೆ. ಏ.16ರ ಮಧ್ಯರಾತ್ರಿ ಐತಿಹಾಸಿಕ ಕರಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂಜಾನೆ ಮತ್ತೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ವಾಪಸ್ಸಾಗಲಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಇದ್ದ ಕಾರಣ ಐತಿಹಾಸಿಕ ಕರಗ ಮಹೋತ್ಸವವನ್ನು ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಸಾಧಾರಣವಾಗಿ ಆಚರಿಸಲಾಗಿತ್ತು.
ಏ.8ರ ರಾತ್ರಿ 10ಗಂಟೆಗೆ ರಥೋತ್ಸವ ಹಾಗೂ ರಾತ್ರಿ 3 ಗಂಟೆಗೆ ಧ್ವಜಾರೋಹಣದ ಮೂಲಕ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು.
ಏ.9ರಿಂದ 16ರವರೆಗೆ ರಾತ್ರಿ 7.30ರಿಂದ ಪ್ರತಿದಿನ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಏ.13ರ ಎಕಾದಶಿ ಮಧ್ಯರಾತ್ರಿ ಆರತಿ ದೀಪಗಳ ಸೇವೆ ನೆರವೇರಲಿವೆ. 14 ರ ಮಧ್ಯರಾತ್ರಿ 3 ಗಂಟೆಗೆ ಹಸಿ ಕರಗ ನಡೆಯಲಿದೆ.
ಏ.15ರ ಮಧ್ಯರಾತ್ರಿ ಪೊ೦ಗಲು ಸೇವೆ, ಪುರಾಣ ಕಥನ ನಡೆಯಲಿದ್ದು, 16ರ ಚೈತ್ರ ಪೂರ್ಣಿಮಾ ದಿನದಂದು ಮಧ್ಯರಾತ್ರಿ ಕರಗ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ.
ಏ.17 ರಂದು ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಗಾವು ಶಾಂತಿ ನಡೆಯಲಿದೆ. 18ರಂದು ವಸಂತೋತ್ಸವ ಹಾಗೂ ಧ್ವಜಾರೋಹಣದೊಂದಿಗೆ 11 ದಿನಗಳ ಕರಗ ಮಹೋತ್ಸವಕ್ಕೆ ತೆರೆ ಎಳೆಯಲಾಗುವುದು.

Articles You Might Like

Share This Article