ಬೆಂಗಳೂರು ಕರಗ ರದ್ದು

ಬೆಂಗಳೂರು, ಏ.19- ನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಏ.27ರಂದು ನಡೆಯಬೇಕಿದ್ದ ಬೆಂಗಳೂರು ಕರಗ ಉತ್ಸವವನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಹಲವಾರು ದಶಕಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದ್ದ ಕರಗ ಉತ್ಸವವನ್ನು ಇದುವರೆಗೂ ಯಾವುದೇ ಕಾರಣಕ್ಕೂ ರದ್ದುಗೊಳಿಸಿರಲಿಲ್ಲ.

ಕಳೆದ ವರ್ಷವೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉತ್ಸವಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.
ಈ ಬಾರಿಯೂ ಸಾಂಪ್ರದಾಯಿಕ ಉತ್ಸವಕ್ಕೆ ಅವಕಾಶ ನೀಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಕರಗ ನಡೆಯುವ ಧರ್ಮರಾಯ ಸ್ವಾಮಿ ದೇಗುಲದ ಸುತ್ತಮುತ್ತಲ ಪ್ರದೇಶದಲ್ಲೇ ನೂರಾರು ಮಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಈ ಬಾರಿ ಕರಗ ಉತ್ಸವವನ್ನು ಸಂಪೂರ್ಣ ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಕಾರಿ ಆದೇಶ ಹೊರಡಿಸಿದ್ದಾರೆ.