ಬೆಂಗಳೂರಿನಲ್ಲಿ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ ಕರಗ..!

Social Share

ಬೆಂಗಳೂರು,ಫೆ.10-ಕೊರೊನಾ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳಿಂದ ನಿರ್ಬಂಧ ವಿಧಿಸಲಾಗಿದ್ದ ವಿಶ್ವ ವಿಖ್ಯಾತ ಬೆಂಗಳೂರು ಕರಗ ಈ ಬಾರಿ ಅದ್ದೂರಿಯಾಗಿ ನೆರವೇರುವ ಸಾಧ್ಯತೆಗಳಿವೆ. ಬರುವ ಮಾ.8 ರಂದು ಕರಗ ಉತ್ಸವ ನಡೆಯಲಿದ್ದು, ಕರಗ ಸಮಿತಿಯವರು ಈಗಾಗಲೆ ಸಕಲ ಸಿದ್ದತೆಗಳನ್ನು ಕೈಗೊಂಡಿದ್ದಾರೆ.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕರಗ ಉತ್ಸವ ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಕಾಲದಿಂದಲೂ ಕರಗ ಉತ್ಸವ ನಡೆದುಕೊಂಡು ಬರುತ್ತಿದೆ. ಉತ್ಸವ ಅರಂಭದ ದಿನದಿಂದಲೂ ಇಲ್ಲಿಯವರೆಗೆ ದೇಶ ವಿದೇಶಗಳ ಸಾವಿರಾರು ಮಂದಿಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇಂದಿಗೂ ಕರಗ ಉತ್ಸವಕ್ಕೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳ 50 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆದು ಪುನಿತರಾಗುತ್ತಾರೆ. ಇಂತಹ ಜನಾಕರ್ಷಣೆಯ ಉತ್ಸವದ ಮೇಲೂ ಕೊರೊನಾ ಕರಿನೆರಳು ಬಿದ್ದ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕರಗ ಉತ್ಸವವನ್ನು ಸಾಧಾರಣವಾಗಿ ನಡೆಸಲಾಗಿತ್ತು.
ಆದರೆ, ಈ ಬಾರಿ ಕೊರೊನಾ ಸೋಂಕು ಕ್ಷೀಣಿಸಿರುವುದರಿಂದ ಮಾರ್ಚ್‍ನಲ್ಲಿ ನಡೆಯಲಿರುವ ಕರಗದ ಅದ್ಧೂರಿ ಆಚರಣೆಗೆ ಅನುಮತಿ ನೀಡುವಂತೆ ವಿಧಾನಪರಿಷತ್ ಸದಸ್ಯ ಹಾಗೂ ಕರಗ ಸಮಿತಿ ಅಧ್ಯಕ್ಷ ಪಿ.ಆರ್.ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಮನವಿ ಮಾಡಿಕೊಂಡಿದ್ದರು.
ರಮೇಶ್ ಅವರ ಮನವಿಗೆ ಆಯುಕ್ತರು ಮೌಖಿಕ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಕರಗ ಉತ್ಸವದ ಸಕಲ ಸಿದ್ಧತೆ ಆರಂಭಿಸಲಾಗಿದೆ. ದೇವಾಲಯದ ಆವರಣಕ್ಕೆ ಸುಣ್ಣಬಣ್ಣ ಬಳಿಯಲಾಗುತ್ತಿದೆ. ಈ ಬಾರಿ ಜ್ಞಾನೇಂದ್ರ ಅವರು ಕರಗ ಹೊರುತ್ತಿದ್ದಾರೆ.
ಕಳೆದ 7 ವರ್ಷಗಳಿಂದ ಕರಗ ಹೊರುತ್ತಿರುವ ಜ್ಞಾನೇಂದ್ರ ಅವರು ಈ ಬಾರಿ ಕರಗ ಹೊರಲು ಅಗತ್ಯವಿರುವ ಸಂಪ್ರದಾಯ ಪಾಲನೆಗೂ ಮುಂದಾಗಿದ್ದಾರೆ.
ಕರಗ ಆಚರಣೆ ಕುರಿತಂತೆ ಮಾತನಾಡಿರುವ ಗೌರವ್ ಗುಪ್ತಾ ಅವರು, ಸದ್ಯ ಕೊರೊನಾ ತಗ್ಗಿದ್ದು, ಕರಗ ಆಚರಣೆಗೆ ಆಡಚಣೆ ಉಂಟಾಗುವುದಿಲ್ಲ ಎಂಬ ಭಾವನೆ ಇದೆ ಆದರೂ, ಮಾರ್ಚ್ ತಿಂಗಳಿನಲ್ಲಿ ಮತ್ತೊಮ್ಮೆ ಅಕಾರಿಗಳ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Articles You Might Like

Share This Article